ನಿನ್ನೆ, ಇಂದು ಮತ್ತು ನಾಳೆ
ನಾನು ಮಿತ್ರನಲ್ಲಿ ಹೇಳಿದೆ, "ನೋಡು ಅಲ್ಲಿ ಆತನ ತೆಕ್ಕೆಯಲ್ಲಿರುವವಳನ್ನು. ನಿನ್ನೆ ಆಕೆ ನನ್ನ ತೆಕ್ಕೆಯಲ್ಲಿದ್ದಳು".
ನನ್ನ ಮಿತ್ರ ನುಡಿದ, " ನಾಳೆ ಆಕೆ ನನ್ನ ತೆಕ್ಕೆಯಲ್ಲಿರುವಳು".
ನಾನು ಹೇಳಿದೆ, " ನೋಡು ಆಕೆ ಆತನ ಸನಿಹದಲ್ಲೇ ಕುಳಿತುಕೊಂಡಿದ್ದಾಳೆ, ನಿನ್ನೆ ತಾನೇ ನನ್ನ ಸನಿಹದಲ್ಲಿದ್ದಳು"
ಮಿತ್ರ ಹೇಳಿದ, "ನಾಳೆ ಆಕೆ ನನ್ನ ಸನಿಹದಲ್ಲಿರುವಳು".
ನಾನು ಹೇಳಿದೆ, " ನೋಡು ಆಕೆ ಆತನ ಕೈಯಿಂದ ಮಧುಪಾನ ಮಾಡುತ್ತಿದ್ದಾಳೆ, ನಿನ್ನೆ ಆಕೆ ನನ್ನ ಕೈಯಿಂದ ಮಧುಪಾನ ಮಾಡಿದ್ದಳು".
ಮಿತ್ರ ನುಡಿದ, "ನಾಳೆ ಆಕೆ ನನ್ನ ಕೈಯಿಂದ ಮಧುಪಾನ ಮಾಡಲಿಹಳು".
ನಾನು ಹೇಳಿದೆ, "ನೋಡು ಹೇಗೆ ಆಕೆ ಆತನನ್ನು ಪ್ರೀತಿಯಿಂದ ನೋಡುತ್ತಿದ್ದಾಳೆ, ನಿನ್ನೆ ನನ್ನನ್ನು ಅದೇ ಪ್ರೀತಿಯಿಂದ ನೋಡುತ್ತಿದ್ದಳು".
ಮಿತ್ರ ಹೇಳಿದ, " ನಾಳೆ ಆಕೆ ನನ್ನನ್ನು ಪ್ರೀತಿಯಿಂದ ನೋಡುವಳು".
ನಾನು ಹೇಳಿದೆ, " ನೋಡು, ಆಕೆ ಆತನ ಕಿವಿಯಲ್ಲಿ ಪ್ರೇಮದ ಹಾಡುಗಳನ್ನು ಗುನಿಗುನಿಸುತ್ತಿರುವುದು ಕೇಳಿಸುತ್ತಿಲ್ಲವೇ ನಿನಗೆ? ನಿನ್ನೆ ಆಕೆ ನನ್ನ ಕಿವಿಯಲ್ಲಿ ಅದೇ ಹಾಡುಗಳನ್ನು ಗುನುಗುನಿಸಿದ್ದಳು".
ಮಿತ್ರ ಹೇಳಿದ, " ನಾಳೆ ಆಕೆ ನನಗಾಗಿ ಆ ಹಾಡುಗಳನ್ನು ಗುನುಗುನಿಸಲಿಹಳು".
ನಾನು ಹೇಳಿದೆ, " ನೋಡು ಆಕೆ ಅವನನ್ನು ಅಪ್ಪಿಕೊಂಡಿರುವುದನ್ನು, ನಿನ್ನೆ ಆಕೆ ನನ್ನನ್ನು ಅಪ್ಪಿಕೊಂಡಿದ್ದಳು"
ಮಿತ್ರ ಹೇಳಿದ," ನಾಳೆ ಆಕೆ ನನ್ನನ್ನು ಅಪ್ಪಿ ಕೊಳ್ಳಲಿಹಳು".
ಆಗ ನಾನು ಉದ್ಗರಿಸಿದೆ," ಎಂತಹ ವಿಚಿತ್ರ ಹೆಣ್ಣು !".
ಮತ್ತು ಮಿತ್ರ ಉತ್ತರಿಸಿದ, " ಆಕೆ ಬದುಕಿನ ವಿಸ್ತರಣೆ, ಎಲ್ಲ ಮನುಷ್ಯರೂ ಆಕೆಯನ್ನು ಪಡೆದವರೇ, ಆಕೆಯೊಂದು ಮೃತ್ಯು, ಆಕೆಗೆ ಸೋಲದವರಿಲ್ಲ, ಆಕೆಯೆಂದರೆ ಅನಂತತೆ, ಆಕೆ ಅಪ್ಪಿಕೊಳ್ಳದವರಿಲ್ಲ!".
-- ಗಿಬ್ರಾನ್ 'ಅಲೆಮಾರಿ' ಕೃತಿಯಲ್ಲಿ
ಅನು : ಪುನೀತ್ ಅಪ್ಪು.

Comments
Post a Comment