ಮಗ್ರೀಬಿನ ಸೂರ್ಯ
June 15, 2017 ಲೇ : ಪುನೀತ್ ಅಪ್ಪು "ಬಾಪಾ, ನಾಳೆಯಾದ್ರೂ ಶಾಲೆಗೆ ಬರ್ತಿರಾ?" ಮಸೀದಿಯ ಪಕ್ಕದ ಕಚೇರಿಯಲ್ಲಿದ್ದ ಟೆಲಿಫೋನಿಗೆ ಕರೆ ಮಾಡಿದ್ದ ಸಯೀದಾ ಕೇಳುತ್ತಿದ್ದಳು. ಅದ್ದು ಉಸ್ತಾದ್ ನಿಲ್ಲಲು ಶಕ್ತಿ ಸಾಲದೆ ಕೊಟಡಿಯ ಗೋಡೆಗೆ ಒರಗಿಕೊಂಡರು. ಮಗಳ ಧ್ವನಿಯಲ್ಲಿ ತನ್ನ ಬಗ್ಗೆ ತಾತ್ಸಾರದ ಭಾವವಿದೆಯಾ, ಛೇ ಛೇ ಇರಲಾರದು ಹದಿಮೂರರ ಹರೆಯದಲ್ಲಿಯೇ ಮನೆಯ ಜವಾಬ್ದಾರಿ ವಹಿಸಿಕೊಂಡವಳು ಸಯೀದಾ. ''ಬಾಪಾ.." ಸಯೀದಾ ಇನ್ನೊಮ್ಮೆ ಕರೆದಾಗ ಅದ್ದು ಉಸ್ತಾದ್ ನೆನಪಿನ ಜಂಗುಳಿಯಿಂದ ಹೊರಬಂದರು. "ಹ್ಞಾ.. ಮೋಳೆ, ನಾಳೆ ಬೆಳಿಗ್ಗೆ ಎಂಟು ಗಂಟೆಯ ಬಸ್ಸಿನಲ್ಲಿ ನಿನ್ನ ಸ್ಕೂಲ್ ಪೀಜನ್ನು ಕಳುಹಿಸುತ್ತೇನೆ, ಆ ಬಸ್ಸಲ್ಲಿ ಕಂಡಕ್ಟರ್ ನನ್ನ ಅಳಿಯ ಅಲ್ವಾ.. ನಿನ್ನ ಸ್ಕೂಲಿಗೇ ತಲುಪಿಸುತ್ತಾನಮ್ಮ", "ಆದರೂ ನೀವೊಮ್ಮೆ ಬರಬೇಕೆಂದು ಹೆಡ್ ಮಾಸ್ತರ್ ಹೇಳಿದ್ದಾರೆ ಬಾಪಾ", "ನಾಳೆ ನಾನು ಬಂದರೆ ಇಲ್ಲಿ ಬಾಂಗ್ ಕೊಡೋದು ಯಾರು ಮೋಳೆ, ನೋಡೋಣ ಈ ಜುಮ್ಮಾ ಕಳೆದ ನಂತರ ಚನಿಯಾಸೆಗಾದ್ರೂ ಬರುತ್ತೇನೆ", "ಆಯ್ತು ಬಾಪಾ", "ಉಮಾ ಹೇಗಿದ್ದಾಳೆ ಮೋಳೆ", "ಇನ್ನೂ ಕೆಮ್ಮು ನಿಂತಿಲ್ಲ ಬಾಪಾ, ಡಾಕ್ಟ್ರು ಕೊಟ್ಟ ಮದ್ದು ಇನ್ನೂ ಇದೆ" ಅದ್ದು ಉಸ್ತಾದ್ ಪತ್ನಿ ಮದುವೆಯಾಗುವಾಗಲೇ ಅಷ್ಟೇನು ಹುಷಾರಿನವರಾಗಿರಲಿಲ್ಲ, ಆದರೂ ಮದುವೆಯಾಗಿ ಬಂದಂದಿನಿಂದ ಪತಿಯೊಂದಿಗೆ ಎಂದೂ ಕೊಂಕು ಮಾ...








