ನನ್ನ ದೇಶದ ರಾಜಕೀಯ ಮಾತನಾಡಲೊಲ್ಲದ ಬುದ್ಧಿಜೀವಿಗಳಿಗೆ...
ಒಂದು ದಿನ
ನನ್ನ ದೇಶದ ರಾಜಕೀಯವಿಲ್ಲದ
ಬುದ್ಧಿಜೀವಿಗಳನ್ನು
ಸಾಮಾನ್ಯಾತಿ ಸಾಮಾನ್ಯರು
ವಿಚಾರಣೆ ಮಾಡಲಿದ್ದಾರೆ
ಪುಟ್ಟ ಹಣತೆಯಂತೆ
ನಿಧಾನವಾಗಿ
ಅನಾಥವಾಗಿ
ಮೆಲ್ಲ ಮೆಲ್ಲನೆ
ನನ್ನ ದೇಶ ನಂದಿ ಹೋಗುತ್ತಿದ್ದಾಗ
ನೀವೆಲ್ಲಿದ್ದಿರೆಂದು ಕೇಳಲಿದ್ದಾರೆ...
ನಿಮ್ಮ ಸೂಟು ಬೂಟುಗಳ
ಬಗ್ಗೆಯಾಗಲೀ
ನಿಮ್ಮ ಮಧ್ಯಾಹ್ನದ
ಊಟದ ನಂತರದ ಸುದೀರ್ಘ
ನಿದ್ದೆಯ ಬಗ್ಗೆಯಾಗಲೀ
ಶೂನ್ಯವಾದದ ಬಗೆಗಿನ
ಶುದ್ಧ ವಿಚಾರ ಲಹರಿಯ
ಬಗ್ಗೆಯಾಗಲೀ
ನಿಮ್ಮ ಆರ್ಥಿಕತೆಯ ಜ್ಞಾನದ
ಅರಿವಿನ ಬಗ್ಗೆಯಾಗಲೀ
ಅವರು ತಲೆ ಕೆಡಿಸಿಕೊಳ್ಳುವುದಿಲ್ಲ...
ನಿಮ್ಮ ಗ್ರೀಕ್ ಪುರಾಣಗಳ
ಅರಿವಿನ ಕುರಿತಾಗಲೀ
ನಿಮ್ಮೊಳಗೆ ಯಾರೋ
ಹೇಡಿಯಂತೆ ಸತ್ತಾಗ
ನೀವು ನಡೆಸಿದ
ಆತ್ಮ ರೋಧನೆಗಳ ಬಗ್ಗೆಯಾಗಲೀ
ಅವರು ಕೇಳುವುದಿಲ್ಲ...
ನಿಮ್ಮ ಬದುಕಿನ ನೆರಳಿನಲ್ಲಿ
ಹುಟ್ಟಿದ ಅಸಂಗತ
ವಶೀಲಿಗಳ ಬಗ್ಗೆಯೂ
ಅವರು ಕೇಳುವುದಿಲ್ಲ...
ಆ ದಿನ ಸಾಮಾನ್ಯ ಜನರು ಬರುವರು
ನಿಮ್ಮ ಪುಸ್ತಕಗಳಲ್ಲಿ
ಕವಿತೆಗಳಲ್ಲಿ
ಎಂದಿಗೂ ಕಂಡು ಬರದವರು
ಆದರೇ,
ನಿಮ್ಮ ಬೆಳಗಿನ ಉಪಹಾರಕ್ಕೆ
ಹಾಲು ರೊಟ್ಟಿಗಳನ್ನು
ತಪ್ಪದೆ ಒದಗಿಸಿದವರು
ನಿಮ್ಮ ಕಾರುಗಳನ್ನು
ಚಲಾಯಿಸಿದವರು
ನಿಮ್ಮ ನಾಯಿಗಳನ್ನು
ಹಿಡಿದುಕೊಂಡು ಪಾರ್ಕುಗಳಲ್ಲಿ
ನೋಡಿಕೊಂಡವರು
ನಿಮ್ಮನ್ನು ಕೇಳಲಿದ್ದಾರೆ...
ಅವರೊಳಗಿಂದ
ಅವರ ಮುಗ್ದತೆ ಮತ್ತು
ಬದುಕು ಕರಟಿಹೋದಾಗ
ನೀವೇನು ಮಾಡುತ್ತಿದ್ದಿರೆಂದು...
ನನ್ನ ಭವ್ಯ ನಾಡಿನ
ರಾಜಕೀಯ ಮಾತನಾಡಲೊಲ್ಲದ
ಓ ಬುದ್ಧಿಜೀವಿಗಳೇ
ಅಂದು ನಿಮ್ಮಲಿ ಉತ್ತರವಿದ್ದೀತೇ ?
ಮೌನದ ಹದ್ದು
ನಿಮ್ಮ ಅಹಮಿಕೆಯನ್ನು
ಕುಕ್ಕಿ ತಿಂದೀತೇ ?
ನಿಮ್ಮ ದೈನೇಸಿ ಬದುಕು
ನಿಮ್ಮದೇ ಆತ್ಮವನ್ನು
ಕೆಣಕೀತೇ ?
ನಿರ್ಲಜ್ಜೆಯಲ್ಲಿ
ನಿಮ್ಮ ನಾಲಗೆಯು
ಉಡುಗಿ ಹೋಗದಿದ್ದೀತೇ ?
-- ಒಟ್ಟೋ ರೇನೇ ಕಾಸ್ಟಿಲೋ
ಅನುವಾದ : ಪುನೀತ್ ಅಪ್ಪು
02-10-2020


Comments
Post a Comment