ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಹಕ್ಕುಗಳು ಪರಸ್ಪರ ವಿರೋಧಿಗಳೇ ?
ಐಕ್ಯತೆಯ ದಾರಿಗಳು
ಜನ್ಮ ತಳೆಯಲಿ ನಿನ್ನ ಬರಹದಲ್ಲಿ
ಎಚ್ಚರ! ಹೃದಯಗಳು ನೋವುಣ್ಣದಿರಲಿ
ನಿನ್ನ ಲೇಖನಿಯಲ್ಲಿ !
-- ಅಲ್ಲಾಮ ಇಕ್ಬಾಲ್.
ಧರ್ಮಗಳು ಮನುಷ್ಯ ಜನಾಂಗಳಿಗೆ ನೈತಿಕ ಪಥವನ್ನು ಹಾಕಿಕೊಟ್ಟು ನಾಗರೀಕತೆಯನ್ನು ರೂಪಿಸಿದವು. ಧರ್ಮವು ನೀತಿಭೋದೆಯನ್ನು ಮಾಡಿದುದರಿಂದಲೇ ಅದನ್ನು ನೀತಿಯ ಮಾರ್ಗ ಅಥವಾ ನೈತಿಕ ಮಾರ್ಗ ಎಂದು ಕರೆಯುತ್ತಾರೆ. ಚಾಣಕ್ಯ 'ಧರ್ಮಾರ್ಥ ವಿರೋಧೇನ ಕಾಮಂ ಸೇವೇತ ' ಎಂದ , ಅಂದರೆ ಧರ್ಮ ಮತ್ತು ಅರ್ಥಗಳಿಗೆ ವಿರೋಧಾಭಾಸವಾಗದಂತೆ ಮನುಷ್ಯರು ಬಯಕೆಗಳನ್ನು ಪೂರೈಸಿಕೊಳ್ಳಬೇಕು. ಶಿಲಾಯುಗದಿಂದ ಆಧುನಿಕ ಯುಗದವರೆಗೆ ನಾನಾ ರೀತಿಯ ಧರ್ಮಗಳು ಮತ್ತು ಪ್ರವಾದಿಗಳು ಈ ಜಗತ್ತಿನಲ್ಲಿ ಆಗಿ ಹೋದರು. ಇವರಲ್ಲಿ ಮುಖ್ಯವಾಗಿ ಬುದ್ಧ , ಜೀಸಸ್ ಮತ್ತು ಪ್ರವಾದಿ ಪೈಗಂಬರರಿಗೆ ವಿಶ್ವವ್ಯಾಪಿಯಾಗಿ ಕೋಟ್ಯಾಂತರ ಅನುಯಾಯಿಗಳಿದ್ದು ಅವರ ಸಂಖ್ಯೆ ಇನ್ನೂ ಬೆಳೆಯುತ್ತಲೇ ಇದೆ. ಹೀಗೆ ಪರಸ್ಪರ ಮೂಲಭೂತ ವ್ಯತ್ಯಾಸಗಳನ್ನು, ಆಚರಣೆಗಳನ್ನು ಅನುಸರಿಸುತ್ತಿರುವ ಜನರು ಒಂದೇ ರಾಷ್ಟ್ರದಲ್ಲಿ ಬದುಕುತ್ತಿರುವಾಗ ಭಿನ್ನಾಭಿಪ್ರಾಯಗಳು ಸಹಜವೇ ಆಗಿದೆ.
ಆದರೆ ಕೆಲವೊಮ್ಮೆ ಇಂತಹ ಭಿನ್ನಾಭಿಪ್ರಾಯಗಳು ಮಹಾಸಂಗ್ರಾಮವಾಗಿ ಸ್ಫೋಟವಾದದ್ದೂ ಇದೆ. ಇದು ಧರ್ಮ ಧರ್ಮಗಳ ನಡುವಿನ ಸಂಗ್ರಾಮವಾಗಿ ಮಾರ್ಪಟ್ಟು ದೇಶಗಳು ವಿಘಟನೆಯಾಗಲೂ ಕಾರಣವಾಯಿತು. ಹಾಗಾದರೆ ಇದರ ಹಿಂದಿರುವುದು ಕೇವಲ ಧಾರ್ಮಿಕ ಭಿನ್ನಮತ ಮಾತ್ರವೇ ಅಥವಾ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿವೆಯೇ ಎಂಬುದನ್ನು ಕೂಡಾ ಚಿಂತಿಸಬೇಕಾಗಿದೆ.
ಅರಬ್ ದೇಶಗಳಲ್ಲಿ ತೈಲ ನಿಕ್ಷೇಪಗಳು ಪತ್ತೆಯಾದ ನಂತರದಿಂದ ಔರೋಪ್ಯ ದೇಶಗಳು ನಡೆಸಿದ ಅತೀ ದೊಡ್ಡ ಸಂಚು ಇಸ್ಲಾಮೋಫೋಬಿಯಾದ್ದು. ತೈಲ ಸಂಪತ್ತು ಹೊಂದಿರುವ ದೇಶಗಳಲ್ಲಿನ ಬಂಡುಕೋರ ಸಮೂಹಗಳಿಗೆ ಬಾಹ್ಯಬೆಂಬಲ ಕೊಡುತ್ತಾ ಅವರನ್ನು ಆಯಾ ದೇಶಗಳ ವಿರುದ್ಧ ಎತ್ತಿಕಟ್ಟುತ್ತಾ, ಅವರಿಗೆ ಬೇಕಾದ ಶಸ್ತ್ರಾಶಗಳನ್ನು ಪೂರೈಸುತ್ತಾ ಮುಸ್ಲಿಂ ದೇಶಗಳ ಆಂತರಿಕ ಕಲಹಕ್ಕೆ ಕಾರಣವಾಗಿದ್ದು ಈಗ ಗುಟ್ಟಾಗಿ ಉಳಿದಿಲ್ಲ.
ಸ್ಪೈನ್ ದೇಶ, ಯುಗೋಸ್ಲೋವಿಯಾ ,ಅಲ್ಜೀರಿಯಾ ಮತ್ತು ಪಾಲೈಸ್ತೀನ್ ಇವತ್ತು ಔರೋಪ್ಯ ದೌರ್ಜನ್ಯದ ಕುರುಹುಗಳಾಗಿ ಉಳಿದಿವೆ. ಫ್ರಾನ್ಸ್ ಕ್ರಾಂತಿ ತಂದ ಬದಲಾವಣೆ ಅಲ್ಲಿ ಮುಕ್ತ ಸಮಾಜ ನಿರ್ಮಾಣಕ್ಕೆ ಕಾರಣವಾದರೂ ಅಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳ ಮೇಲಿನ ದೌರ್ಜನ್ಯ ನಿಂತಿಲ್ಲ. ಪ್ರಜಾಪ್ರಭುತ್ವವು ಎಲ್ಲಾ ಪ್ರಜೆಗಳ ಧಾರ್ಮಿಕ ಅಸ್ಮಿತೆಯನ್ನು ಗೌರವಿಸದೆ ಲಿಬರಲಿಸಂ ಹೆಸರಿನಲ್ಲಿ ಕಮ್ಯೂನಿಸ್ಟ್ ವಾದವನ್ನು ಹೇರುವುದಾದರೆ ಅದನ್ನು ಪ್ರಜಾಪ್ರಭುತ್ವ ಎಂದು ಕರೆಯಲು ಹೇಗೆ ಸಾಧ್ಯ. ಇತ್ತೀಚೆಗೆ ಈ ನಿಟ್ಟಿನಲ್ಲಿ ಬಹುಚರ್ಚಿತವಾಗಿರುವ ವಿಷಯವೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಹಕ್ಕುಗಳು. ಪ್ರಾನ್ಸಿನಲ್ಲಿ ನಡೆದ ಎರಡು ಘಟನೆಗಳು ಇಡೀ ಜಗತ್ತೇ ಧರ್ಮ ಮತ್ತು ಸ್ವಾತಂತ್ರ್ಯ ಎಂಬ ಎರಡು ಪರಿಭಾಷೆಗಳನ್ನು ಪುನರ್ವ್ಯಾಖ್ಯಾನ ಮಾಡುವಂತಾಗಿದೆ. ಆದರೆ ಈ ವ್ಯಾಖ್ಯಾನಗಳು ಪೂರ್ವಾಗ್ರಹಗಳಿಂದ ಮುಕ್ತವಾಗಿದೆಯೇ? ಪ್ರವಾದಿಯವರ ವ್ಯಂಗ್ಯಚಿತ್ರವನ್ನು ಪ್ರಕಟಿಸಿದ ಚಾರ್ಲಿ ಹೆಬ್ಡೋ ಪತ್ರಿಕೆ ಅದನ್ನು ಸಮರ್ಥಿಸಿಕೊಳ್ಳಲು ತಾನು ಕ್ರೈಸ್ತ ಧರ್ಮವನ್ನು ಅದಕ್ಕಿಂತಲೂ ಹೆಚ್ಚು ಟೀಕಿಸಿರುವುದಾಗಿ ಹೇಳಿಕೊಂಡಿದೆ. ಅದಕ್ಕೆ ಪ್ರತ್ಯುತ್ತರವೆಂಬಂತೆ ಚಾರ್ಲಿ ಹೆಬ್ಡೋ ಪತ್ರಿಕೆಗೆ ದಾಳಿಯಾಗಿತ್ತು. ನಂತರದ ಇನ್ನೊಂದು ಘಟನೆಯಲ್ಲಿ ಫ್ರಾನ್ಸಿನ ಒಬ್ಬ ಶಿಕ್ಷಕನನ್ನು ಒಬ್ಬ ವಿದ್ಯಾರ್ಥಿಯೇ ಭೀಬತ್ಸವಾಗಿ ಕೊಲೆ ಮಾಡಿದ್ದಾನೆ. ಈಗ ಇಡೀ ಫ್ರೆಂಚ್ ಸರಕಾರವೃ ಆರೋಪಿ ಮತ್ತು ಆತನ ಧರ್ಮದ ವಿರುದ್ಧ ತಿರುಗಿಬಿದ್ದಿದೆ. ಆರೋಪಿಯು ಮುಸ್ಲೀಂ ಧರ್ಮಾನುಯಾಯಿ ಮತ್ತು ಆತನೂ ಅಂತಹ ಧರ್ಮನಿಂದನೆಯನ್ನು ಸಹಿಸದೆ ಕೊಲೆ ನಡೆಸಿದ್ದಾನೆ ಎಂಬುದು ನಿರ್ವಿವಾದ. ಅದರ ಮುಂದುವರಿದ ಹಂತವಾಗಿ ಫ್ರೆಂಚ್ ಸರಕಾರವು ಆತನ ಎನ್ಕೌಂಟರ್ ನಡೆಸಿ ಹತ್ಯೆ ಮಾಡಿತು. ಆದರೆ ಅಷ್ಟಕ್ಕೇ ಮುಗಿಯಲಿಲ್ಲ.
ಈಗ ಫ್ರಾನ್ಸ್ ದೇಶದ ಕಣ್ಣು ಮಸೀದಿಗಳ ಮೇಲೆ ಬುದ್ದಿದೆ. ಸಾವಿರಾರು ಮಸೀದಿಗಳನ್ನು ಮುಚ್ಚಿಸಲಾಗಿದೆ. ಅಭಿವ್ಯಕ್ತ ಸ್ವಾತಂತ್ರ್ಯವನ್ನೇ ಮುಂದಿಟ್ಟುಕೊಂಡು ಧಾರ್ಮಿಕ ಸ್ವಾತಂತ್ರವನ್ನು ಮೊಟಕುಗೊಳಿಸಲು ಸರಕಾರ ಸಜ್ಜಾಗಿದೆ. ಇದರ ವಿರುದ್ಧ ಪ್ರತಿಭಟಿಸುವವರನ್ನು ಭಯೋತ್ಪಾದಕರು ಎಂದು ಬಿಂಬಿಸಲೂ ತಯಾರಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವೇ? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವುದೇ ನಿಯಮಗಳಿಲ್ಲವೇ? ಅದೊಂದು ಕಡಿವಾಣವಿಲ್ಲದ, ಅಂಕುಶವಿಲ್ಲದ , ನಿರ್ಭಾವುಕವಾದ ಅಧಿಕಾರವೇ? ಹಾಗಾದರೆ ಅಂತಹಾ ಅಭಿವ್ಯಕ್ತಿ ಸ್ವಾತಂತ್ರ್ಯವು ಅರಾಜಕೀಯತೆಗೂ, ಸರ್ವಾಧಿಕಾರಕ್ಕೂ ಮುನ್ನುಡಿಯಾಗುವುದಿಲ್ಲವೇ? ಅಥವಾ ಈಗಾಗಲೇ ಔರೋಪ್ಯ ಆರ್ಥಿಕ ಸಂಚಿಗೆ ಬಲಿಯಾಗಿರುವ ಮುಸ್ಲೀಂ ಸಮುದಾಯವನ್ನು ಇನ್ನಷ್ಟು ಗೊಂದಲದಲ್ಲಿರಿಸಲು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಗುರಾಣಿಯನ್ನು ಬಳಸಲಾಗುತ್ತಿದೆಯೇ?
ತನ್ನ ಧರ್ಮವನ್ನು ಟೀಕಿಸುವುದು ಇನ್ನೊಂದು ಧರ್ಮವನ್ನು ಟೀಕಿಸಲು ಪರವಾನಿಗೆಯಾವುದೇ?
ಅಥವಾ ಲಿಬರಲಿಸಮನ್ನು ಕೇವಲ ಮುಸ್ಲೀಂ ದ್ವೇಷಕ್ಕೆ ಬಳಸಿ ವರ್ಗರಹಿತ ಸಮಾಜದ ಕನಸು ಕಂಡಿದ್ದ, ಫೆಂಚ್ ಕ್ರಾಂತಿಗೆ ಪ್ರಭಾವ ಬೀರಿದ್ದ ಒಂದು ಆದರ್ಶವನ್ನು ಸಂಕುಚಿತವಾಗಿ ಬಳಸಿಕೊಳ್ಳುವುದು ಸರಿಯೇ ?
ಈ ಪ್ರಶ್ನೆಗಳನ್ನು ವಿವಿಧ ಆಯಾಮಗಳಲ್ಲಿ ಪರಿಶೀಲಿಸಿದಾಗ ಧಾರ್ಮಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಮತ್ತು ಧರ್ಮಾನುಯಾಯಿಗಳನ್ನು ನೋಯಿಸಲು ಮತ್ತು ಉದ್ವಿಗ್ನಗೊಳಿಸಲು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೇಗೆ ಚತುರೋಪಾಯದಿಂದ ಬಳಸಲಾಗುತ್ತಿದೆ ಎಂದು ಅರ್ಥವಾಗುತ್ತದೆ.
ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮುಸ್ಲೀಮರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹೇಗೆಲ್ಲಾ ಪ್ರಯತ್ನಿಸುತ್ತಿದ್ದಾರೆ ಎಂಬುದು ವೇದ್ಯವಾಗುತ್ತದೆ.
ಅಭಿವ್ಯಕ್ತಿ ಸ್ವಾತಂತ್ರ್ಯಗಳು ಸಾಮಾಜಿಕ ಜವಾಬ್ದಾರಿಯಿಂದ ಕೂಡಿರಬೇಕು ಎಂಬುದು ಸಂವಿಧಾನದ ಆಶಯ. ಸಲ್ಮಾನ್ ರಶ್ದಿಯವರ 'ಸಟಾನಿಕ್ ವರ್ಸಸ್ ' ಕಾದಂಬರಿಯು ಹಲವಾರು ದೇಶಗಳಲ್ಲಿ ಅದರ ಇಸ್ಲಾಮಿಕ್ ವಿರೋಧಿ ಧೋರಣೆಗಳಿಗಾಗಿ ನಿಷೇದಕ್ಕೊಳಗಾಯಿತು. ಇದರ ಬಗ್ಗೆ ಹಿರಿಯ ಪತ್ರಕರ್ತರೂ ಮಾಜಿ ರಾಜ್ಯಸಭಾ ಸದಸ್ಯರೂ ಆಗಿದ್ದ ದಿವಂಗತ ಕುಲ್ ದೀಪ್ ನಯ್ಯರ್ ಅವರು ವಿವರಿಸುತ್ತಾರೆ.
ಸಲ್ಮಾನ್ ರಶ್ದಿಯವರ ಅಸಮಧಾನಗೊಂಡಿದ್ದವರ ಪಟ್ಟಿಯಲ್ಲಿ ಭಾರತ ಉಪಖಂಡದ ಪ್ರಗತಿಶೀಲ ಲೇಖಕ ಖುಷ್ವಂತಸಿಂಗ್ ಅವರ ಹೆಸರೂ ಇತ್ತು. ಖುಷ್ವಂತ್ ಸಿಂಗ್ ಪೆಂಗ್ವಿನ್ ಪ್ರಕಾಶನ ಸಂಸ್ಥೆಯ ಸಲಹಾ ಸಂಪಾದಕರಾಗಿದ್ದ ಸಂದರ್ಭದಲ್ಲಿ ರಶ್ದಿಯ 'ಸಟಾನಿಕ್ ವರ್ಸಸ್ ' ಕಾದಂಬರಿಯನ್ನು ಭಾರತದಲ್ಲಿ ಪ್ರಕಟಿಸದಂತೆ ಸಲಹೆ ನೀಡಿದ್ದರಂತೆ. ಇದರಿಂದ ಸಲ್ಮಾನ್ ರಶ್ದಿ ಅಸಮಧಾನಗೊಂಡಿದ್ದರು.
ಸ್ವತಃ ಒಬ್ಬ ಪತ್ರಕರ್ತನೂ ದಿಟ್ಟ ಕಾದಂಬರಿಕಾರರೂ ಆಗಿದ್ದ ಖುಷ್ವಂತ್ ಸಿಂಗ್ 'ಸಟಾನಿಕ್ ವರ್ಸಸ್ ' ಕಾದಂಬರಿಯನ್ನು ಭಾರತದಲ್ಲಿ ಪ್ರಕಟಿಸುವುದಕ್ಕೆ ವಿರೋಧಿಸಲು ಕಾರಣವೇನು ಎಂದು ಕೇಳಿದಾಗ ಅವರ ಉತ್ತರ ಸರಳವಾಗಿತ್ತು , ' ಅದು ಭಾರತದ ಮುಸಲ್ಮಾನರ ಧಾರ್ಮಿಕ ನಂಬಿಕೆಗಳಿಗೆ ದಕ್ಕೆ ತರುತ್ತದೆ' ಸಾಹಿತ್ಯವಾದರೂ ಆ ಸಾಹಿತ್ಯ ಪ್ರಕಟಗೊಳ್ಳುವ ಸಮಾಜದಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನವೇನು ಮತ್ತು ಅವರು ಬಹುಸಂಖ್ಯಾತರ ಪೂರ್ವಾಗ್ರಹಗಳಿಂದ ಸಂಪೂರ್ಣ ಮುಕ್ತರಾಗಿದ್ದಾರೆಯೇ ಎಂಬ ಆಯಾಮಗಳಿಂದ ವಿಮರ್ಶಿಸದೆ ನೇರವಾಗಿ ಧರ್ಮಸೂಕ್ಷ್ಮಗಳಿಗೆ ಹಸ್ತಕ್ಷೇಪ ಮಾಡುವುದಕ್ಕೆ ಖುಷ್ವಂತ್ ಸಿಂಗ್ ಅವರ ಸಮ್ಮತಿಯಿರಲಿಲ್ಲ.
ಧಾರ್ಮಿಕ ಅನುಯಾಯಿಗಳು ಎರಡು ರೀತಿಯ ಬದುಕುಗಳನ್ನು ಬದುಕಬೇಕಾಗುತ್ತದೆ. ಒಂದು ದೇಶದ ಕಾನೂನು ಇನ್ನೊಂದು ಧಾರ್ಮಿಕ ನಿಯಮಗಳು. ಧಾರ್ಮಿಕ ನಿಯಮಗಳಿಗೆ ದೇಶದ ಕಾನೂನುಗಳು ರಕ್ಷಣೆ ಒದಗಿಸುತ್ತವೆ. ತಕ್ಕ ಮಟ್ಟಿಗೆ ಧಾರ್ಮಿಕ ನಿಯಮಗಳು ಸರಿಯಾದ ರೀತಿಯಲ್ಲಿ ಅನುಸರಿಸಲು ಸಾಧ್ಯವಾಗುವಂತೆ ದೇಶದ ಕಾನೂನುಗಳು ಪ್ರಜೆಗಳಿಗೆ ಸಹಕಾರಿಯಾಗುತ್ತವೆ.
ದೇಶದ ಕಾನೂನುಗಳು ಧಾರ್ಮಿಕ ಹಕ್ಕುಗಳನ್ನು ನೀಡಿದರೆ ಧರ್ಮವು ಆಚರಣೆಯನ್ನು ವಿವರಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರವು ವ್ಯಕ್ತಿಯ ಮೂಲಭೂತ ಹಕ್ಕಾಗಿದ್ದರೆ, ಇನ್ನೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವುದು ಆ ವ್ಯಕ್ತಿಯ ಕರ್ತವ್ಯವೂ ಆಗಿರುತ್ತದೆ.
ಇಲ್ಲಿ ಎರಡೂ ಒಂದಕ್ಕೊಂದು ಪೂರಕವಾಗಿದ್ದಾಗ ಮಾತ್ರ ಪ್ರಜಾಪ್ರಭುತ್ವ ಸಂಪನ್ನವಾಗುತ್ತದೆ.
-- ಪುನೀತ್ ಅಪ್ಪು
29--10--2020


Comments
Post a Comment