ಎಲ್ಲಕ್ಕಿಂತ ಅಪಾಯಕಾರಿಯೆಂದರೆ ಬದುಕಿರುವಾಗಲೇ ನಮ್ಮ ಕನಸುಗಳು ಸಾಯುವುದು...
'ಪಾಶ್' ಎಂದೇ ಪ್ರಸಿದ್ಧರಾಗಿರುವ ಪಂಜಾಬಿ ಕವಿ ಅವತಾರ್ ಸಿಂಗ್ ಸಂಧೂ ಜನಿಸಿದ್ದು ಸೆಪ್ಟೆಂಬರ್ 8, 1950 ರಲ್ಲಿ. ಎಡಪಂಥೀಯ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಈ ಕ್ರಾಂತಿ ಕವಿ ಸರ್ವ ವಿಧದ ಸರ್ವಾಧಿಕಾರವನ್ನೂ ದಿಕ್ಕರಿಸಿದರು. ಕತ್ತಿಯ ಅಲಗಿನಂತೆ ಹರಿತವಾಗಿದ್ದ ಅವರ ಕವಿತೆಗಳು ಹಲವಾರು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಕಣ್ಣು ಕೆಂಪಾಗಿಸಿದ್ದವು. 1988 ಮಾರ್ಚ್ 23 ರಂದು ಅಂದರೆ ಭಗತ್ ಸಿಂಗ್ ನನ್ನು ಬ್ರಿಟೀಷರ್ ಗಲ್ಲಿಗೇರಿಸಿದ್ದ ದಿನವೇ ಕವಿ 'ಪಾಶ್' ರನ್ನು ಖಲಿಸ್ತಾನಿ ಉಗ್ರರು ಹತ್ಯೆಗೈದರು.
ಅವರ ಪ್ರಸಿದ್ಧ ' ಮೆಹನತ್ ಕೆ ಲೂಟ್ ಸಬ್ಸೇ ಖತರ್ನಾಕ್ ನಹೀ ಹೋತಿ' ಕವಿತೆಯನ್ನು 2006 ರಲ್ಲಿ ಎನ್ ಸಿ ಆರ್ ಟಿ ಪಠ್ಯಕ್ರಮದಲ್ಲಿ ಬಳಸಲಾಯಿತು. ನಂತರ ಆ ಕವಿತೆಯನ್ನು ಶಾಲಾ ಪಠ್ಯದಿಂದ ನಿಷೇದಿಸಬೇಕೆಂದು ಸಾಕಷ್ಟು ಆಕ್ರೋಶಗಳೂ ಕೇಳಿಬಂದವು. ಆ ಕವಿತೆಯ ಅನುವಾದವನ್ನು ಓದುವುದರ ಜೊತೆಗೆ ಹಿರಿಯ ಪತ್ರಕರ್ತ ರವೀಶ್ ಕುಮಾರ್ ರವರ ಮಾತುಗಳನ್ನೂ ಆಲಿಸಿ.
☆☆☆☆
ದುಡಿಮೆಯ ಲೂಟಿಯೇನೋ
ಭಯಾನಕವಾಗಿರುವುದಿಲ್ಲ
ಪೋಲಿಸರ ಲಾಟಿಯೂ
ಭಯಾನಕವಾಗಿರುವುದಿಲ್ಲ
ಸಾರ್ಥ ವಿದ್ರೋಹದ ಕಪಿ ಮುಷ್ಠಿಯೂ
ಭಯಾನಕವಾಗಿರುವುದಿಲ್ಲ
ಮಾಡದ ತಪ್ಪಿಗೆ ಸಿಕ್ಕಿ ಬಿದ್ದದ್ದು
ಕೆಟ್ಟದ್ದೇನೋ ಹೌದು
ತಾಳ್ಮೆಯಿಂದ ಸಹಿಸಿಕೊಂಡಿದ್ದು
ಕೆಟ್ಟದ್ದೇನೋ ಹೌದು ಆದರೆ
ಅಷ್ಟು ಭಯಾನಕವಾಗಿರುವುದಿಲ್ಲ
ಕಪಟದ ಗದ್ದಲಕ್ಕೆ ಸತ್ಯವೊಂದು
ಅಪ್ಪಚ್ಚಿಯಾಗಿದ್ದು
ಕೆಟ್ಟದ್ದೇನೋ ಹೌದು…
ದ್ವಂದ್ವಕ್ಕೆ ಬಿದ್ದು
ಮುಷ್ಠಿ ಬಿಗಿ ಹಿಡಿದು
ಕಾಲ ಕಳೆದಿದ್ದು
ಕೆಟ್ಟದ್ದೇನೋ ಹೌದು…
ಚಡಪಡಿಕೆಯಿಲ್ಲದೆ
ತಣ್ಣನೆ ಶವವಾಗಿ
ಎಲ್ಲವನ್ನೂ ಸಹಿಸಿಕೊಂಡದ್ದು ಮಾತ್ರ
ಭಯಾನಕವಾಗಿರುತ್ತದೆ
ಕೆಲಸಕ್ಕೆಂದು ಮನೆಯಿಂದ ಹೊರಟು
ಕೆಲಸ ಮುಗಿದೊಡನೆ ಮನೆಗೆ ಮರಳಿದ್ದು
ಭಯಾನಕವಾಗಿರುತ್ತದೆ
ಕನಸುಗಳು ಸತ್ತು ಹೋಗಿ
ಕೈಕಾಲುಗಳು ಚಲಿಸುತ್ತಲೇ
ಕಳೆದು ಹೋದ ಆ ದೃಷ್ಠಿ
ಭಯಾನಕವಾಗಿರುತ್ತದೆ
ಜಗವನ್ನು ಪ್ರೀತಿಯಿಂದ
ಕಣ್ತುಂಬಲು ಮರೆತ ಕಂಗಳು
ಭಯಾನಕವಾಗಿರುತ್ತದೆ
ಕೆಟ್ಟ ವ್ಯವಸ್ಥೆಯಲ್ಲಿ ತನ್ನಲ್ಲಿ ತಾನೇ
ಮನಸ್ಸುಗಳು ಕಳೆದು ಹೋಗಿದ್ದು
ಭಯಾನಕವಾಗಿರುತ್ತದೆ
ಮಸೀಹ ನಂತೆ ಮಲಗಿದ್ದ ಕವಿತೆ
ಭಯಗೊಂಡವರ ಬಾಗಿಲಿಗೆ
ಗೂಂಡಾಗಳಂತೆ ಮುಗಿಬಿದ್ದದ್ದು
ಭಯಾನಕವಾಗಿರುತ್ತದೆ
ಹತ್ಯಾಕಾಂಡದ ಮೈದಾನದಲ್ಲಿ
ಆಗಸವೇರಿದ ಆ ಚಂದಿರ
ನಿಮ್ಮ ಕಣ್ಣುಗಳಿಗೆ ಮೆಣಸಿನ ಖಾರವನು
ಎರಚದಿದ್ದದ್ದು ಭಯಾನಕವಾಗಿರುತ್ತದೆ !!
ಆತ್ಮ ಸೂರ್ಯ ಅಸ್ತಂಗತನಾದ ಆ ದಿಕ್ಕು
ಪೂರ್ವದಲಿ ಇಣುಕುತಿಹ ಆ ಶವದ ನೆರಳು
ಭಯಾನಕವಾಗಿರುತ್ತದೆ !!
ಪಂಜಾಬಿ/ಹಿಂದಿ ಮೂಲ : ಪಾಶ್
ಅನುವಾದ : ಪುನೀತ್ ಅಪ್ಪು
'


Comments
Post a Comment