ಸಬ್ ಇನ್ಸೆಪೆಕ್ಟರ್ ರಾಮಸಿಂಗನ ಟ್ರೈನಿಂಗ್ !



ರಾಮ್ ಸಿಂಗ್ ಪ್ರತೀದಿನ ಸಂಜೆ ನನ್ನ ಮನೆಗೆ ಬರುತ್ತಾನೆ. ಮನೆಯ ಅಂಗಳದಿಂದಲೇ ಎಲ್ಲರಿಗೂ ಕೇಳಿಸುವ ಹಾಗೆ ನನಗೆ ವಾಚಾಮಗೋಚರವಾಗಿ ಬೈಯ್ಯುತ್ತಾನೆ. " ಲೋ ಹರಿಶಂಕರ ಪರಸಾಯಿ... ಬಾರೆಲೋ ಹೊರಗೆ,  ಸೂ.. ಮಗನೇ... ನೀನೊಬ್ಬ ದೊಡ್ಡ ಸಾಹಿತಿ ಅಂದ್ಕೊಂಡಿದ್ದೀಯೇನೋ? ಬಾರೋ ಮಗನೇ, ಇವತ್ತು ಈ ರಾಮ್ ಸಿಂಗ್ ಸಬ್ ಇನ್ಸ್ಪೆಕ್ಟರ್ ಅಂದ್ರೆ ಏನೂ ಅಂತ ತೋರಿಸಿಕೊಡ್ತಿನೋ...'

ಸುಮಾರು ಒಂದು ತಾಸುಗಳವರೆಗೆ ಆತನ ಬೈಗುಳಗಳ ದಾಳಿ ನಡೆಯುತ್ತದೆ.  ನೆರೆಹೊರೆಯವರು ಕೇಳುತ್ತಾರೆ, 'ಆತನಿಗೇನು ಹುಚ್ಚುಗಿಚ್ಚು ಹಿಡಿದಿದೆಯಾ ' ಎಂದು. ನಾನು, 'ಇಲ್ಲಾ' ಎನ್ನುತ್ತೇನೆ. ಅವರು ಸಮಾಧಾನಗೊಳ್ಳುವುದಿಲ್ಲ. 'ನೀವೇ ಆ ಪೋಲಿಸಪ್ಪನಿಗೆ ಹೊಡೆಯಿತ್ತೀರೋ ಅಥವಾ ನಾವೇ ಅವನಿಗೆ ಹೊಡೆದು ನಮ್ಮ ನೆರೆಹೊರೆಯವರ ಕರ್ತವ್ಯವನ್ನು ಪಾಲಿಸಬೇಕೋ?' ಎಂದು ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ. ನಾನು ನಕ್ಕುಬಿಡುತ್ತೇನೆ. ಅವರು ನನ್ನನ್ನು ಕೂಡಾ 'ಹೇಡಿ' ಇಲ್ಲವೇ ಹುಚ್ಚ ಎಂದು ತಿಳಿದುಕೊಳ್ಳುವ ತಯಾರಿಯಲ್ಲಿದ್ದಾರೆ.

 ರಾಮ್ ಸಿಂಗ್ ಕೇವಲ ಬೈಯ್ಯುವುದು ಮಾತ್ರವಲ್ಲ, ಒಂದುದಿನ ಆತ ನನ್ನ ಮನೆಯೊಳಕ್ಕೆ ಒಂದೆರಡು ಗಾಂಜಾದ ಎಲೆಗಳನ್ನು ಹಾಕಿಬಿಟ್ಟು, ಬೆಳಗ್ಗೆ ನನ್ನ ಮನೆಯನ್ನು ತಲಾಶು ಮಾಡಿದ. ನಂತರ ಒಂದು ರುಮಾಲಿನಿಂದ ನನ್ನ ಕೈಗಳನ್ನು ಕಟ್ಟಿಹಾಕಿ ನನ್ನನ್ನು ಬಂಧಿಸಿದ. 

ರಾಮ್ ಸಿಂಗ್ ನನಗೆ ಒಬ್ಬ ಚಿಕ್ಕ ತಮ್ಮನ ಹಾಗೆ,  ಮಮತೆಯುಳ್ಳ ವ್ಯಕ್ತಿ. ಇವೆಲ್ಲವನ್ನೂ ನೋಡುವಾಗ ನನಗೆ ಸಂತಸವಾಗುತ್ತದೆ. ರಾಮ್ ಸಿಂಗ್ ಬಲು ವೇಗವಾಗಿ ಉನ್ನತಿಯತ್ತ ಸಾಗುತ್ತಿದ್ದಾನೆ, ಆತ ತನ್ನ ಹುದ್ದೆಯಲ್ಲಿ ಸಾಕಷ್ಟು ಪ್ರಸಿದ್ಧಿಯನ್ನೂ ಪಡೆಯಲಿದ್ದಾನೆ. 

ನಿಮಗೆ ವಿಷಯ ಹೇಳುತ್ತೇನೆ. ಏಳೆಂಟು ದಿನಗಳ ಹಿಂದಿನ ಮಾತು, ರಾಮ್ ಸಿಂಗನ ದೊಡ್ಡ ಅಣ್ಣನಾದ ಹನುಮಾನ್ ಸಿಂಗ್ ಬಲು ಬೇಸರದಿಂದಲೇ ನನ್ನ ಬಳಿ ಬಂದಿದ್ದ. 'ಸಾರ್ ನಿಮಗೆ ಗೊತ್ತಿದೆಯೇ ? ರಾಮ್ ಸಿಂಗ್ ರಜೆಯಲ್ಲಿ ಮನೆಗೆ ಬಂದಿದ್ದಾನೆ, ಏನ್ ಒಂದು ಪೋಲಿಸ್ ಅಧಿಕಾರಿ ಅಂತ ಆಗ್ಬಿಟ್ಟ, ನಮ್ಮನ್ನೆಲ್ಲಾ ಆಗ್ಲೇ ಮೇಲೆ ಕೆಳಗೆ ಮಾಡೋಕೆ ಶುರು ಹಚ್ಚಿದ್ದಾನೆ ಅವನು, ಇಡೀ ನಮ್ಮ ಮನೆಯನ್ನೇ ಹದ್ದುಬಸ್ತಿಗೆ ತೆಗೆದುಕೊಂಡಿದ್ದಾನೆ, ಕೋಣೆಯ ಬಾಗಿಲುಗಳನ್ನು ಹಾಕಿಕೊಂಡು ಗಂಟೆಗಟ್ಟಲೆ ಬೈಯ್ಯುತ್ತಾ ಇರುತ್ತಾನೆ. ಒಂದು ದಿನ ನಾನು ಕಿಟಕಿಯ ಸಂಧಿಯಲ್ಲಿ ಇಣುಕಿನೋಡಿದೆ, ಗೋಡೆಯ ಮೇಲೆ ತೂಗುಹಾಕಿರುವ ನಮ್ಮ ತಾತ-ಮುತ್ತಾತಂದಿರ, ನೇತಾರರ ಪೋಟೋಗಳನ್ನು ನೋಡುತ್ತಾ ಅವರಿಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾನೆ! ಒಂದು ದಿನ ನಾನು ನನ್ನ ಸಣ್ಣಮಗ ಮುನ್ನಾನಿಗೆ ಮನೆಯಲ್ಲೇ ಓದುತ್ತಿರು ಅಂತಾ ಹೇಳಿ ಹೊರಗಡೆ ಹೋಗಿದ್ದೆ, ಮರಳಿ ಮನೆಗೆ ಬಂದಾಗ ನನ್ನ ದೊಡ್ಡ ಮಗಳು ಹೇಳಿದ್ಳು. ಅಪ್ಪಾ, ಚಿಕಪ್ಪನಿಗೇನು ತಲೆಕೆಟ್ಟಿದೆಯಾ? ನೀವು ಹೊರಗೆ ಹೋದ ಮೇಲೆ ಮುನ್ನ ಆಟ ಆಡಲೆಂದು ಹೋಗಿದ್ದ, ಆತ ವಾಪಾಸು ಬರಬೇಕಾದರೆ ಚಿಕಪ್ಪ ಆತನಿಗೆ ತಗಲಾಕ್ಕೊಂಡ, 'ಯೇ ಮುನ್ನಾ, ನನಗೊಂದ್ರುಪಾಯಿ ಕೊಡು ಇಲ್ಲಾಂದ್ರೆ ಅಣ್ಣನಿಗೆ ರಿಪೋರ್ಟ್ ಮಾಡಿ ನಿನಗೆ ಗೂಸಾ ಕೊಡಿಸ್ತೀನಿ ' , ಅಂದಿದ್ದಾನೆ ಎಂದಳು. ನಾನು ನಗುತ್ತಾ ಮುನ್ನನ ಕೈಯ್ಯಲ್ಲಿ ಒಂದುರೂಪಾಯಿ ಕೊಟ್ಟು, ಹೋಗಿ ಚಿಕ್ಕಪ್ಪನಿಗೆ ಕೊಡು ಎಂದೆ. ದೇವರೇ ನೀವು ನಂಬಲಿಕ್ಕೇ ಇಲ್ಲಾ ಸಾರ್, ರಾಮ್ ಸಿಂಗ್ ಆ ಒಂದು ರೂಪಾಯಿಯನ್ನು ಜೇಬಿಗಿಳಿಸಿಯೇ ಬಿಟ್ಟ !, ವಿಚಿತ್ರವಾಗಿ ವರ್ತಿಸುತ್ತಾನೆ ಸಾರ್, ಮಕ್ಕಳಲ್ಲಿ ನೀರು ತಂದುಕೊಂಡಿ ಎಂದು ಹೇಳುತ್ತಾನೆ, ಒಂದು ವೇಳೆ ತಡವಾದರೆ,  'ಏನೋ ಬೇಗನೇ ನೀರು ತಂದುಕೊಡೋಕೆ ಆಗೋದಿಲ್ಲವೇನೋ? ಏನೆಂದು ತಿಳ್ಕೊಂಡಿಯೋ? ಏಳುವರ್ಷ ಒದ್ದು ಒಳಗೆ ಹಾಕಿಸ್ತಿನಿ ನಿನ್ನ' ಎಂದು ಕೂಗಾಡುತ್ತಾನೆ ಸಾರ್ !, ನನಗೆ ಆತನ ದೊಡ್ಡ ಅಣ್ಣ ಎಂಬ ಒಂದು ಧೈರ್ಯ ಇದೆ.  'ಏನಿದೆಲ್ಲಾ ರಾಮ್ ಸಿಂಗ್ ?' ಅಂತಾ ಕೇಳಿದ್ರೆ ಆತ ನಕ್ಕು ಬಿಟ್ಟು 'ಮುಂದೆ ನಿನಗೆಲ್ಲಾ ತಿಳಿಯುತ್ತೆ ' ಎಂದು ಹೇಳಿಬಿಡುತ್ತಾನೆ ಸಾರ್. ಏನು ಹೇಳಲಿ ಸಾರ್!  ನನಗನಿಸುತ್ತೆ ಆತನಿಗೆ ತಲೆಯೇ ಕೆಟ್ಟಿದೆ'.

ರಾಮ್ ಸಿಂಗನನ್ನು ನಾನು ಆತನ  ಬಾಲ್ಯದಿಂದಲೂ ಬಲ್ಲೆ. ಸುಶೀಲನೂ ಪ್ರಾಮಾಣಿಕನೂ ಆಗಿದ್ದ ಸಾಧು ಹುಡುಗನಾಗಿದ್ದ ಆತ. ಹನುಮಾನ್ ಸಿಂಗ ನನ್ನ ಬಳಿಬಂದ ಮರುದಿನವೇ ನಾನು ಆತನನ್ನು ಬೇಟಿಯಾದೆ. 'ರಾಮ್ ಸಿಂಗ್ ಏನು ವಿಷಯ?' ಎಂದು ಕೇಳಿದೆ.  ಆತ ಹೇಳಿದ, '  ನನ್ನಣ್ಣ ನಿಮ್ಮಲ್ಲಿ ಏನೋ ದೂರು ಕೊಟ್ಟಿರಬೇಕು, ನೋಡಿ ಸಾರ್,ನನ್ನನು ಯಾರೂ ಅರ್ಥವೇ ಮಾಡಿಕೊಳ್ಳುತ್ತಿಲ್ಲ, ನಾನು ಹೇಳ್ತಿದ್ದೇನೇ ಒಂದು ತಿಂಗಳವರೆಗಾದ್ರೂ ಯಾರೂ ಏನೂ ಹೇಳಬೇಡಿ, ನನ್ನ ತಲೆಕೆಟ್ಟಿಲ್ಲ, ನಾನು ಆರೋಗ್ಯವಾಗಿಯೇ ಇದ್ದೇನೆ '.

ನಾನು,  ' ರಾಮ್ ಸಿಂಗ್ ಹಾಗಾದ್ರೆ ಮತ್ತೆ ಹೀಗೆಲ್ಲಾ ಯಾಕೆ ಮಾಡುತ್ತಿದ್ದಿಯಾ?'  ಎಂದು ಕೇಳಿದೆ. 
ಆ ದಿನ ಆತ ಬಿಚ್ಚಿಟ್ಟ ಕಥೆಯನ್ನು ಆತನ ಮಾತಿನಲ್ಲಿಯೇ ಹೇಳುತ್ತೇನೆ. 

" ಸಾರ್, ನಾನು ಹೊಸದಾಗಿ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡವನು, ನನ್ನ ಮನಸ್ಸಿನಲ್ಲಿ ಉನ್ನತ ಆದರ್ಶಗಳು ಮತ್ತು ಜನ ಸೇವೆಯನ್ನು ಮಾಡಬೇಕೆಂಬ ಭಾವನೆಗಳಿದ್ದವು. ಒಂದು ದಿನ ಹತ್ತಿರದ ಹಳ್ಳಿಯಿಂದ ಒಬ್ಬ ಹುಡುಗ ನನ್ನ ಠಾಣೆಗೆ ಬಂದು ಅವನ ಮನೆಯಲ್ಲಿ ಹಿಂದಿನ ರಾತ್ರಿ ಕಳ್ಳತನ ಆಗಿದೆ ಎಂದು ಹೇಳಿದ. ನಾನು ಆ ಕೂಡಲೇ ತನಿಖೆ ನಡೆಸಲೆಂದು ಆ ಹಳ್ಳಿಗೆ ತಲುಪಿದೆ.

 ಆ ಮನೆಯ ಅಂಗಳದಲ್ಲಿಯೇ ಒಬ್ಬ ವೃದ್ಧ ತಲೆ ಬಾಗಿಸಿಕೊಂಡು ಕುಳಿತಿದ್ದ. ನನ್ನನ್ನು ನೋಡಿದ ತಕ್ಷಣ ಹೆದರಿ ನಡುಗಿಕೊಂಡೇ ಎದ್ದು ನಿಂತ ಮತ್ತು ಬನ್ನಿ ಸ್ವಾಮೀ, ಬನ್ನಿ, ಇಲ್ಲಿ ಕುಳಿತುಕೊಳ್ಳಿ ಎಂದು ವಿನಂತಿಸಿಕೊಂಡ ಮತ್ತು ನನ್ನ ಯೋಗಕ್ಷೇಮ ವಿಚಾರಿಸತೊಡಗಿದ. ನಾನು ,  ತಾತಾ, ನಿಮ್ಮ ಮನೆಯಲ್ಲೇ ತಾನೇ ಕಳ್ಳತನ ಆಗಿರೋದು? ಎಂದು ಕೇಳಿದೆ. ಆತ ಸುಮ್ಮನೇ ನಿಂತುಕೊಂಡ. 

ನಾನು ಪುನಃ, 'ತಾತಾ ಕಳ್ಳತನ ನಿನ್ನ ಮನೇಲೇ ನಡೆದಿರೋದು ತಾನೇ? ' ಎಂದು ಕೇಳಿದೆ.  ಆತ, ' ಸ್ವಾಮೀ ನನ್ನಲ್ಲೇ ಕೇಳುತ್ತಿದ್ದಿರೋ ?' ಎಂದು ಕೇಳಿದ. ನಾನು, ಹೌದು ತಾತಾ ನಿಮ್ಮಲ್ಲೇ ಕೇಳಿತ್ತಿದ್ದೇನೆ, ಎಂದೆ.  ಆಗ ಆತ, ' ಆದ್ರೆ ಮಹಾಸ್ವಾಮಿ, ನನ್ನ ಹೆಸರು ಲೋ ಮುದಿಯಾ ಅಂತ ನಾನು ತಾತ ಅಲ್ವಲ್ಲಾ ' ಎಂದು ಉತ್ತರಿಸಿದ. ನನಗೆ ಆ ವೃದ್ಧನ ಮಾತು ಅರ್ಥವಾಗಲಿಲ್ಲ. ನನ್ನ ಕೆಲಸ ಬೇಗನೇ ಮುಗಿಸಲೆಂದು, ಸರಿ ಕಳ್ಳತನ ಯಾವಾಗ ನಡೆಯಿತು, ಎಂದು ಕೇಳಿದೆ.  ವೃದ್ಧ ಸುಮ್ಮನಾದ. ನಾನು ಇನ್ನೊಮ್ಮೆ ಕೇಳಿದೆ. ಆಗ ವೃದ್ಧ ಎರಡೂ ಕೈಗಳನ್ನು ಜೋಡಿಸುತ್ತಾ ' ತೆಪ್ಪಾಯ್ತು  ಮಹಾಸ್ವಾಮೀ ತೆಪ್ಪಾಯ್ತೂ... ಆ ಹುಡುಗನಿಗೆ ತಿಳುವಳಿಕೆ ಇಲ್ಲ. ನಾನು ಮನೆಯಲ್ಲಿರಲಿಲ್ಲ. ನಾನಿದ್ರೆ ನಿಮ್ಮ ಹತ್ತಿರ ದೂರು ಬರುತ್ತಲೇ ಇರಲಿಲ್ಲ. ನಿಮಗೆ ಇಲ್ಲಿಯವರೆಗೆ ಬರುವ ಕಷ್ಟವೇ ಇರುತ್ತಿರಲಿಲ್ಲ, ಆ ಹುಡುಗನನ್ನು ಕ್ಷಮಿಸಿಬುಡಿ ಸ್ವಾಮೀ' ಎಂದು ಕೇಳಿಕೊಂಡ. 

ನಾನು ದೊಡ್ಡ ಸಂಕಷ್ಟದಲ್ಲಿ ಸಿಲುಕಿಕೊಂಡೆ. ಏನು ಹೇಳ್ತಿದ್ದೀಯಾ ತಾತಾ?  ನಮ್ಮಲ್ಲಿ ದೂರು ಕೊಡದೆ ಇನ್ಯಾರಲ್ಲಿ ಕೊಡ್ತೀರಾ ? ಅಷ್ಟಕ್ಕೂ ನಾವಿರುವುದಾದರೂ ಯಾಕೆ? ನಿಮ್ಮ ಮನೆಯ ಕಳ್ಳತನದ ಬಗ್ಗೆ ತನಿಖೆ ಮಾಡಿ ನಿಮ್ಮ ಕದ್ದುಹೋದ ವಸ್ತುಗಳನ್ನು ವಾಪಾಸುಕೊಡಿಸುತ್ತೇನೆ, ನೀವೀಗ ನಿಮ್ಮ ಮನೆಯಲ್ಲಿ ಎಷ್ಟು ಗಂಟೆಗೆ ಕಳ್ಳತನ ನಡೆಯಿತು ಮತ್ತು ಏನೇನು ವಸ್ತುಗಳು ಕಳ್ಳತನವಾದವು ಎಂದು ಮಾಹಿತಿಕೊಡಿ, ಎಂದು ಹೇಳಿದೆ. ವೃದ್ಧ ಮತ್ತೆ ಮೌನವಾದ. ಅಲ್ಲಿ ನಿಂತಿದ್ದ ಜನರತ್ತ ಏನೋ ಹೇಳುವಂತೆ ನೋಡಹತ್ತಿದ. ಆತನ ಹುಡುಗ ಹಾಲಿನ ಲೋಟವನ್ನು  ನನಗೆ ನೀಡಲು ಬಂದ, ಆದರೆ ನಾನು ಸ್ವೀಕರಿಸಲು ನಿರಾಕರಿಸಿದೆ. ಆಗ ಮುದುಕ ವಿನಯದಿಂದ 'ಸ್ವೀಕರಿಸಿ ಸ್ವಾಮೀ' ಎಂದ, ನಾನು 'ಇಲ್ಲ, ನಾನು ಈಗ  ಕರ್ತವ್ಯದಲ್ಲಿರುವೇ ಈ ಹೊತ್ತಿನಲ್ಲಿ ನಿಮ್ಮಿಂದ ಒಂದು ಅಡಕೆ ಚೂರನ್ನೂ ನಾನು ಸ್ವೀಕರಿಸಲಾರೆ, ಎಂದೆ.  

ಜನರು ಅವರಷ್ಟಕ್ಕೆ ಕೆಲವು ಗುಪ್ತ ಸಂಕೇತಗಳನ್ನೂ ಕಣ್ಣಿನಿಂದ ಏನೇನೋ ಹೇಳುತ್ತಿದ್ದುದನ್ನೂ ನೋಡಿದೆ. ನನ್ನ ಪ್ರತೀ ಮಾತುಗಳನ್ನೂ ಕೇಳುತ್ತಿದ್ದಾಗಲೂ ಅವರು ಅಚ್ಚರಿಪಡುತ್ತಾ ಅವರೊಳಗೆ ಸಂಜ್ಞೆಗಳನ್ನು 
 ಶುರುಹಚ್ಚುತ್ತಿದ್ದರು.

 ನಾನು ವೃದ್ಧನಲ್ಲಿ ಹೇಳಿದೆ, ತಾತಾ ನೀನೂ ಚಾರಪಾಯಿಯಲ್ಲಿ ಕುಳಿತುಕೋ ಯಾಕೆ ನಿಂತ್ಕೊಂಡಿದ್ದೀಯಾ,  ವಯಸ್ಸಾಗಿದೆ ನಿನಗೆ ಕೈಕಾಲುಗಳು ನೋಯುವುದಿಲ್ವಾ , ಎಂದು ಹೇಳಿದೆ. 

 ವೃದ್ಧ ಎರಡು ಹೆಜ್ಜೆ ಹಿಂದೆ ಸರಿದ, ಮತ್ತೆ ತನ್ನ ಜನರತ್ತ ತಿರುಗಿ ಏನೋ ಕಣ್ಣಿನಲ್ಲೇ ಮಾತನಾಡಿದ. ನನಗೆ ಇದೆಲ್ಲಾ  ಪೇಚಾಟಕ್ಕೀಡು ಮಾಡಿತು. ಇವರು ನನ್ನ ಮಾತಿಗೂ ಜವಾಬು ನೀಡುವುದಿಲ್ಲ ಮಾತ್ರವಲ್ಲದೆ ಅವರೊಳಗೆಯೇ ಏನೇನೋ ಸನ್ನೆಗಳನ್ನು ಮಾಡುತ್ತಿದ್ದಾರೆ. 

ಅಷ್ಟರಲ್ಲಿ ವೃದ್ಧ ಜೇಬಿನಿಂದ ಕೆಲವು ನೋಟುಗಳನ್ನು ತೆಗೆದುಕೊಂಡು ಹತ್ತಿರ ಬಂದ. ' ಸ್ವಾಮೀ ನಮಗೆ ಗೊತ್ತಿದೆ ನಿಮಗೆ ಬಲು ತೊಂದರೆಯಾಯ್ತು ನಮ್ಮಿಂದಾಗಿ, ಆದರೆ ಸತ್ಯವಾಗಿ ಹೇಳುತ್ತೇನೆ, ನನಗೆ ಗೊತ್ತಿದ್ರೆ  ಅ ಹುಡುಗ ನಿಮ್ಮ ಬಳಿ ದೂರನ್ನು ತರುತ್ತಲೇ ಇರಲಿಲ್ಲ. ನನಗೆ ಗೊತ್ತಿದೆ, ನೀವು ಕೆಲಸಬಿಟ್ಟು ಇಲ್ಲಿಯವರೆಗೆ ಬಂದುದರಿಂದ ನಿಮಗೆ ಸಾಕಷ್ಟು ತೊಂದರೆಯಾಗಿದೆ, ಅದರಿಂದ ನಿಮಗೆ ಸಾಕಷ್ಟು ಖರ್ಚೂ ಆಗುತ್ತೆ ಅಂತಾನೂ ನನಗೆ ಗೊತ್ತು, ಅದಕ್ಕೆ ಪರಿಹಾರ ಕೊಡಬೇಕಾಗುತ್ತೆ ಅಂತಾನೂ ನನಗೆ ಗೊತ್ತು. ತಾವು ದಯವಿಟ್ಟು ಈ ರೂಪಾಯಿಗಳನ್ನು ಸ್ವೀಕರಿಸಿ ನಮ್ಮನ್ನು ಕ್ಷಮಿಸಿಬುಡೀ ಸ್ವಾಮೀ, ಇನ್ನೊಮ್ಮೆ ಇಂತಹ ತಪ್ಪು ಆಗದ ಹಾಗೆ ನೋಡ್ಕೋತೀನಿ' ಎಂದು ಕೇಳಿಕೊಂಡ.

 ನಾನು ಸ್ವಲ್ಪ ಹೊತ್ತು ವಿಚಲಿತನಾದೆ, ನಂತರ, ನೋಡೀ ನನಗೇನೂ ಅರ್ಥವಾಗುತ್ತಿಲ್ಲ, ಒಂದಾ ನಿಮಗೆ ಹುಚ್ಚು ಹಿಡಿದಿದೆ ಅಥವಾ ನಾನು ಕನಸು ಕಾಣುತ್ತಿದ್ದೇನೆ, ನಾನು ಈ ಹಣವನ್ನು ಯಾಕೆ ಪಡೆದುಕೊಳ್ಳಲಿ? ನನಗೆ ನನ್ನ ಕೆಲಸಕ್ಕೆ ಸಂಬಳ ಬರುತ್ತೆ, ಒಂದು ರೂಪಾಯಿಯನ್ನು ಪಡೆದುಕೊಳ್ಳುವುದನ್ನೂ ನಾನು ಪಾಪ ಎಂದೇ ತಿಳಿಯುವವನು, ಎಂದು ಹೇಳಿದೆ. ನನ್ನ ಮಾತುಗಳು ಅವರಲ್ಲಿ ವಿಚಿತ್ರ ಪ್ರಭಾವವನ್ನು ಬೀರಿದವು. 

ವೃದ್ಧನ ಮುಖದಲ್ಲಿದ್ದ ಧೈನ್ಯತೆ ಮಾಯವಾಗಿ ಆತನ ಮುಖ ಬಿಗಿದುಕೊಂಡಿತು. ಆತ ಹಳ್ಳಿಗರಲ್ಲಿ , ' ಇನ್ನೂ ನಿಮಗೆ ಅನುಮಾನವಿದೆಯೋ?'  ಎಂದು ಕೇಳಿದ.  ಹಳ್ಳಿಗರು, 'ಇಲ್ಲಾ' ಎಂದು ಒಕ್ಕೊರಳಿನಿಂದ ಉತ್ತರಿಸಿದರು. ವೃದ್ಧ, 'ಹಾಗಾದ್ರೆ ಏನು ನೋಡ್ತಿದ್ದೀರಾ? ' ಎನ್ನುತ್ತಾ ಅವರಿಗೆ ಹುಕುಂ ಮಾಡಿದ. ನಾನು ಏನಾಗುತ್ತಿದೇ ಎಂದು ಯೋಚಿಸುತ್ತಿರುವಾಗಲೇ ಆ ಹಳ್ಳಿಗರೆಲ್ಲಾ ನನ್ನ ಮೇಲೆ ಮುಗಿಬಿದ್ದು ನನ್ನನ್ನು ಹಗ್ಗದಿಂದ ಹೆಡೆಮುರಿ ಬಿಗಿದು ಕಟ್ಟಿ ಹಾಕಿದರು.  ವೃದ್ಧ ಒಬ್ಬನನ್ನು ಕರೆದು, 'ಹೋಗು, ಪಟ್ಟಣಕ್ಕೆ ಹೋಗಿ ಇನ್ಸ್ಪೆಕ್ಟರ್ ಸಾಹೇಬ್ರಿಗೆ ಹೇಳು, ಒಬ್ಬ ವಂಚಕನೋ ಕಳ್ಳನೋ ಪೋಲೀಸರ ವೇಷ ಧರಿಸಿ ಹಳ್ಳಿಗೆ ಬಂದಿದ್ದಾನೆ, ನಾವು ಆತನ ಕೈಕಾಲು ಕಟ್ಟಿ ಕೂಡಿ ಹಾಕಿದ್ದೇವೆ ಎಂದು ಹೇಳಿ ಪೋಲೀಸರನ್ನು ಕರಕೊಂಡು ಬಾ' ಎಂದು ಹೇಳಿದ.

ನಾನು ಕಿರುಚಾಡತೊಡಗಿದೆ, ' ನೋಡ್ರಪ್ಪಾ ನಾನು ಕಳ್ಳ ಅಲ್ಲ, ನಾನು ಈ ಊರಿಗೆ ಹೊಸ ಸಬ್ ಇನ್ಸ್ಪೆಕ್ಟರ್ ಕಣ್ರಪ್ಪಾ, ಬಿಟ್ಟು ಬಿಡ್ರೋ' ಎಂದು ಬೇಡ ತೊಡಗಿದೆ. 

ವೃದ್ಧ ಹೇಳಿದ, 'ನೀನು ಸಬ್ ಇನ್ಸ್ಪೆಕ್ಟ್ರರ ಅಲ್ಲ, ಆತನ ವೇಷ ಹಾಕಿಕೊಂಡು ನಮ್ಮನ್ನೇ ಯಾಮಾರಿಸಲು ಬಂದವನು. ನೋಡೂ ನೀನು ನನ್ನ ಕಣ್ಣುಗಳಿಗೆ ಮೋಸ ಮಾಡಲು ಸಾಧ್ಯವಿಲ್ಲ ತಿಳಕೋ, ನಾನೇನು ಪೋಲಿಸರನ್ನು ನೋಡಿಲ್ಲಾ ಅಂದ್ಕೊಂಡಿದಿಯಾ? ಪೋಲಿಸರನ್ನು ನೋಡಿ ನೋಡಿನೇ ಮುದುಕಾ ಆಗಿದೀನಿ, ಆದ್ರೆ ನಿನ್ನ ಹಾಗೆ ಪೋಲಿಸರು ಮಾತನಾಡೋದಿಲ್ಲ, ನೀನು ಮೋಸಗಾರ'.

ನಾನು, ' ನಿಮಗೆ ನನ್ನ ಮೇಲೆ ಇರೋ ಅನುಮಾನವಾದರೂ ಏನು ಅದನ್ನಾದರೂ ಹೇಳ್ರಪ್ಪಾ' ಎಂದು ಕೇಳಿದೆ. ಆಗ ವೃದ್ಧ, ' ನಿನ್ನಲ್ಲಿ ಒಂದು ಒಳ್ಳೆ ಪೋಲಿಸ್ ಅಧಿಕಾರಿಯ ಲಕ್ಷಣವೇ ಇಲ್ಲ, ಪೋಲಿಸರನ್ನು ಎಷ್ಟೋ ವರ್ಷಗಳಿಂದ ನೋಡ್ತಿದೀನಿ ನಾನು ಗೊತ್ತಾ? ಯಾರೂ ನನನ್ನು ' ಏನೋ ಮುದ್ಕಾ'  ಎಂಬುದನ್ನು ಬಿಟ್ಟು ಇನ್ನೇನೂ ಅಂದಿಲ್ಲ, ನೀನು ನನ್ನನ್ನು ಅತೀ ಗೌರವದಿಂದ 'ತಾತಾ' ಎಂದು ಕರೆದಾಗಲೇ ನನಗೆ ಅನುಮಾನ ಬಂದಿತ್ತು, ಅದಕ್ಕೂ ಹೆಚ್ಚಾಗಿ ನೀನು ಹಾಲು ಕೊಟ್ರೆ  ಬೇಡ ಅಂದುಬಿಟ್ಟೆ, ಯಾವ ಪೋಲಿಸರಾದ್ರೂ ಹೀಗೆ ಮಾಡುತ್ತಾರಾ? ನೀನು ಹಣವನ್ನೂ ಮುಟ್ಟಲಿಲ್ಲ, ಹೀಗೂ ಯಾವ ಪೋಲಿಸೂ ಮಾಡುವುದಿಲ್ಲ. ಹಳ್ಳಿಯಲ್ಲಿ ಕಳ್ಳತನ ಆದ್ರೆ  ಪೋಲಿಸರು ಬಂದು ತನಿಖೆ ಖರ್ಚು ಇಸ್ಕೊಂಡು ಸರಕಾರದ ಖಜಾನೆಗೆ ತುಂಬಿಸ್ತಾರೆ, 
ಅದಕ್ಕೆ ನಾವು ಹೆದರಿ ದೂರು ಕೊಡಲು ಹೋಗುವುದೇ ಇಲ್ಲ.  ನೀನು ಒಂದುರೂಪಾಯಿನೂ ಮುಟ್ಟೋದಿಲ್ಲ ಆದ್ರೆ ಕಳ್ಳತನದ ತನಿಖೆ ಮಾಡುವೇ ಅಂತಿದ್ದೀಯಾ, ಇಂತಹ ಪೋಲಿಸರನ್ನು ನಾನು ಇಲ್ಲಿಯವರೆಗೆ ನೋಡಿಲ್ಲ. ನೀನು ಮೋಸಗಾರನೇನೋ ಹೌದು ಆದ್ರೆ ಮರೀ ನಿನ್ನ ಆಟ ನಮ್ಮಲ್ಲಿ ನಡೆಯಲಿಲ್ಲ ನೋಡು, ಈಗ ನಿಜವಾದ ಪೋಲಿಸರು ಬಂದು ನಿನ್ನ ವದ್ದು ಒಳಗೆ ಹಾಕ್ತಾರೆ '.

ಸಾರ್, ಅವತ್ತು  ಸಂಜೆಯವರೆಗೆ ಕೈಕಾಲು ಕಟ್ಟಿಸ್ಕೊಂಡು ಅನ್ನ ನೀರಿಲ್ಲದೇ ಆ ಹಳ್ಳಿಯಲ್ಲೇ ಬಂಧಿಯಾಗಿದ್ದೆ. ಸಂಜೆಯಾಗುತ್ತಲೇ ಪಟ್ಟಣದಿಂದ ನಮ್ಮ ಇನ್ಸ್ಪೆಕ್ಟರ್ ಬಂದ. ನನ್ನನ್ನು ಕಟ್ಟಿಹಾಕಿದ್ದನ್ನು ನೋಡಿ ಕೆಂಡಾಮಂಡಲನಾದ ಆತ ಆ ವೃದ್ಧನಿಗೆ ವಾಚಾಮಗೋಚರ ಬೈದು ಬಿಟ್ಟ. 'ಏನೋ ಬೇವರ್ಸಿ ಮುದ್ಕಾ,  ಯಾಕೋ  ಈ ಮನುಷ್ಯನ್ನ ಕಟ್ಟಿ ಹಾಕಿದ್ದೀಯಾ, ತಲೆ ಕೆಟ್ಟಿ ಕೆರ ಹಿಡಿದಿದೆಯೇನೋ ಮುದಿ ಗೂಬೇ..'

ಇನ್ಸ್ಪೆಕ್ಟರರ ಬೈಗುಳವನ್ನು ಕೇಳಿ ವೃದ್ಧ ಸಂತಸಗೊಂಡ. 'ಇದನ್ನೇ ಸ್ವಾಮೀ ನಾನು ಇವ್ನಿಗೆ ಹೇಳುತ್ತಿರೋದು, ನೋಡಿದ್ಯೇನೋ ವಂಚಕ, ಪೋಲಿಸ್ ಆಪ್ಸರ್ ಅಂದ್ರೆ ಹೀಗೆ ಇರ್ತಾರೆ ತಿಳಿತಾ? ಪೋಲಿಸು ವೇಷ ಹಾಕಿಸ್ಕೊಂಡು ತಾತಾ.. ತಾತಾ.. ಅಂತ ಕೈಕಾಲ್ ಹಿಡ್ಕೊಂಡು ಸಿಕ್ಕಾಕೊಂಡ್ ಬಿಟ್ಯಲ್ಲೋ ', ಎಂದು ನಕ್ಕ. 

ಅಂದು ರಾಮ್ ಸಿಂಗ್ ನನ್ನಲ್ಲಿ ತುಂಬಾ ಬೇಸರದಿಂದ ಹೇಳಿದ, 'ಸಾರ್, ಆ ಕೆಟ್ಟ ಘಟನೆಯ ನಂತರ ನನಗೆ ನನ್ನ ತರಬೇತಿ ಅಪೂರ್ಣವಾಗಿದೆ ಅನಿಸತೊಡಗಿತು. ಜನ ನನ್ನನ್ನು ನಕಲಿ ಪೋಲಿಸ್ ಎಂದು ತಿಳಿಯುತಿದ್ದಾರೆ. ನಾನು ಒಂದು ತಿಂಗಳ ರಜೆ ಹಾಕಿ ಊರಿಗೆ ಬಂದೆ '. 

ನಾನು ರಾಮ್ ಸಿಂಗನಲ್ಲಿ ಹೀಗೆ ಹೇಳಿದೆ,' ನೋಡಪ್ಪಾ ರಾಮ್ ಸಿಂಗ್ ನಮ್ಮಿಬ್ಬರ ಹಿರಿಯರೂ ಈಗ ಈ ನಶ್ವರ ಜಗತ್ತಿನಿಂದ ದೂರವಾಗಿದ್ದಾರೆ. ಒಂದು ವೇಳೆ ಅವರು ಇರುತ್ತಿದ್ದರೆ ನೀನು ಅವರನ್ನು ಸದುಪಯೋಗ ಪಡಿಸಿಕೊಂಡು ಎರಡು  ಮೂರು ದಿನಗಳಲ್ಲೇ ನಿನ್ನ ತರಬೇತಿಯನ್ನು ಪೂರ್ಣಗೊಳಿಸಬಹುದಿತ್ತು. ಆದ್ರೆ ನೀನು ಯೋಚನೆ ಮಾಡ್ಬೇಡಾ, ಹೇಗೂ ನಾನು ಬಿಡುವಿನಲ್ಲಿದ್ದೇನೆ, ನೀನು ದಿನಾ ನನ್ನ ಮೇಲೆ ನಿನ್ನ ತರಬೇತಿಯನ್ನು ಪ್ರಯೋಗಿಸು. ಈ ದೇಶಕ್ಕಾಗಿ ನಾನೂ ಸದ್ಬಳಕೆಯಾದೆ ಎಂಬ ಆತ್ಮತೃಪ್ತಿ ನನಗೂ ಲಭಿಸುತ್ತದೆ. ಇದಕ್ಕಿಂತ ಸಾರ್ಥಕವಾದ ಬದುಕು ಇನ್ನೇನಿದೆ. 

ಅಂದಿನಿಂದ ರಾಮ್ ಸಿಂಗ್ ದಿನಾ ಸಂಜೆ ಮನೆಯ ಮುಂದೆ ಬಂದು ನನಗೆ ವಾಚಾಮಗೋಚರ ಬೈಯ್ಯುತ್ತಾನೆ. ನಾನು ಆತನು ತರಬೇತಿಯಲ್ಲಿ ಸಾಧಿಸುತ್ತಿರುವ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ನಸುನಗುತ್ತೇನೆ.


ಹಿಂದಿ ಮೂಲ : ಹರಿಶಂಕರ ಪರಸಾಯಿ
ಕನ್ನಡ ಅನುವಾದ : ಪುನೀತ್ ಅಪ್ಪು
22-04-2020
(c) copy rights reserved. 






Comments