ಬದುಕುವ ಹಕ್ಕಂತೂ ಇಲ್ಲ ಮನುಷ್ಯರಂತೆ ದಫನಗೊಳ್ಳುವ ಹಕ್ಕೂ ಇಲ್ಲವೇ?
'ನಿನ್ನ ಅಹಂಕಾರವನ್ನು ಸಾಧಿಸುವ ಮೊದಲು ನಿನ್ನ ಮುಂದೆ ಇರುವ ಬಡವರ ಮತ್ತು ಅಸಹಾಯಕರ ಬಗ್ಗೆ ಯೋಚಿಸು, ಅವರು ಇನ್ನೂ ಹಸಿವೆಯಿಂದ ಮತ್ತು ಅತೃಪ್ತರಾಗಿ ಬದುಕುತ್ತಿರುವಾಗಲೂ ನಿನ್ನ ಅಹಮಿಕೆಯೇ ನಿನಗೆ ಮುಖ್ಯವಾದೀತೇ? ನಿನ್ನ ಉದ್ದೇಶ ಸಫಲವಾದೀತು ಎಂಬ ನಂಬಿಕೆ ಇನ್ನೂ ಉಳಿದಿದೆಯೇ? '
ನಿನ್ನೆ ಅಕ್ಟೋಬರ್ 1 ರಂದು ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠದ ನ್ಯಾಯಾಧೀಶರಾದ ರಜನ್ ರಾಯ್ ಮತ್ತು ಜಸ್ಪ್ರೀತ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠವು ಅಹಂಕಾರದಿಂದ 'ಸ್ವರಾಜ್ಯ' ಸ್ಥಾಪಿಸಲು ಹೊರಟವರ ಮೇಲೆ ಗಾಂಧೀಜಿಯವರ ಮಾತುಗಳನ್ನು ಉಲ್ಲೇಖಿಸಿ ಒಂದು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲು ಆದೇಶ ನೀಡಿದೆ.
ಉತ್ತರ ಪ್ರದೇಶದ ಹಥ್ರಾಸಿನಲ್ಲಿ 19 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆಗೈದ ಪ್ರಕರಣದಲ್ಲಿ ಕೊನೆಗೂ ಅಲಹಾಬಾದ್ ಹೈಕೋರ್ಟಿನ ಲಕ್ನೊ ಪೀಠ ಕಣ್ಣು ತೆರೆದಿದೆ. 'ಗೌರವಾನ್ವಿತ ಅಂತ್ಯ ಸಂಸ್ಕಾರ ವ್ಯಕ್ತಿಯ ಹಕ್ಕು ' ಇಲ್ಲಿ ಅದು ಕೂಡಾ ಉಲ್ಲಂಘನೆಯಾಗಿದೆ, ಆದುದರಿಂದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದಾಖಲಿಸಲು ಹೈಕೋರ್ಟ್ ರಿಜಿಸ್ತ್ರಿಗೆ ಸೂಚಿಸಿದೆ.
ಇಂಡಿಯನ್ ಎಕ್ಸ್ ಪ್ರೆಸ್, ಅಮರ್ ಉಜಾಲ ಮೊದಲಾದ ಪತ್ರಿಕೆಗಳ ಸುದ್ದಿಗಳನ್ನೂ ಇಂಡಿಯಾ ಟಿವಿಯ 'ಆಜ್ ಕೆ ಬಾತ್' ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಅವರು ನಡೆಸಿಕೊಟ್ಟ ಸುದ್ದಿ ವಿಶ್ಲೇಷಣೆಯನ್ನು ಆಧಾರವಾಗಿಟ್ಟುಕೊಂಡು ನ್ಯಾಯಪೀಠವು ಈ ನಿರ್ಣಯವನ್ನು ಕೈಗೊಂಡಿದೆ. ಸರಕಾರವು ಪೋಲಿಸರ ಮೂಲಕ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಶವವನ್ನು ಸ್ವತಃ ಆಕೆಯ ಹೆತ್ತವರನ್ನೇ ಗೃಹಬಂಧನದಲ್ಲಿಟ್ಟು ಅಂತ್ಯ ಸಂಸ್ಕಾರ ನೆರವೇರಿಸಿರುವುದು ಅತ್ಯಂತ ಹೀನಾಯ ಕೃತ್ಯವೆಂಬ ನಿಟ್ಟಿನಲ್ಲಿ ಹೈಕೋರ್ಟ್ ಹಲವು ರೀತಿಯ ಆದೇಶಗಳನ್ನೂ ನೀಡಿದೆ.
1. ಪಂಡಿತ ಪ್ರಮಾನಂದ ಪ್ರಕರಣದಲ್ಲಿ ಸುಪ್ರೀಕೋರ್ಟ್ ನೀಡಿದ ತೀರ್ಪಿನನ್ವಯ, ಸಂವಿಧಾನದ ವಿಧಿಯಡಿಯಲ್ಲಿ ನೀಡಲಾದ 'ಬದುಕುವ ಹಕ್ಕು ಎಂದರೆ 'ಗೌರವಾನ್ವಿತವಾಗಿ' ಬದುಕುವ ಹಕ್ಕಾಗಿರುತ್ತದೆ, ಇದು ಕೇವಲ ಬದುಕಿರುವ ಮನುಷ್ಯನಿಗೆ ಮಾತ್ರವಲ್ಲ, ಆತ ಸತ್ತ ನಂತರವೂ ಆತನ ಗೌರವವನ್ನು ರಕ್ಷಿಸುವುದು ಕೂಡಾ ಸರಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ.
2. ಮನುಷ್ಯನಿಗೆ ಆತನ /ಆಕೆಯ ಸಂಪ್ರದಾಯ,ಕುಟುಂಬದ ಸಮಕ್ಷಮದೊಂದಿಗೆ ಅಂತ್ಯ ಸಂಸ್ಕಾರಕೊಳ್ಳಪಡುವ ಎಲ್ಲಾ ಹಕ್ಕು ಇದೆ, ಇದನ್ನು ಆತ/ಆಕೆ ಸತ್ತ ನಂತರವೂ ಸರಕಾರ ಆತ/ಆಕೆಗೆ ದೃಢಪಡಿಸಬೇಕು.
3. ಬದುಕಿರುವಾಗ ಆಕೆಗೆ ಯಾವ ರಕ್ಷಣೆಯನ್ನೂ ನೀಡದೆ ಆಕೆ ನರಳಿ, ಹಿಂಸಿಸಲ್ಪಟ್ಟು ಕೊಲೆಯಾದ ನಂತರವೂ ಆಕೆಯ ಮೃತದೇಹಕ್ಕೆ ಕನಿಷ್ಠ ಮರ್ಯಾದೆಯನ್ನೂ ನೀಡದೆ ರಾತೋರಾತ್ರಿ ದಹನ ಮಾಡಿದ ಸರಕಾರದ ಹೀನ ಕೃತ್ಯವನ್ನು ಹೈಕೋರ್ಟ್ ಎಲ್ಲಾ ಕೋನಗಳಿಂದಲೂ ವಿಶ್ಲೇಷಿಸಲು ಸಿದ್ಧವಾಗಿದೆ.
ಕವಿ ಆಸ್ಕರ್ ವೈಲ್ಡ್ ತನ್ನ ಕವಿತೆಯಲ್ಲಿ ಹೇಳಿರುವಂತೆ, 'ಆಕೆಯ ಮರಣವಾದರೂ ಸುಂದರವಾಗಿರಲಿ, ಕಪ್ಪುನೆಲದಡಿಯಲ್ಲಿ, ಮೈಮೇಲೆ ಹುಲ್ಲುರಾಶಿಗಳು ಬೆಳೆಯುವಾಗ ನಿನ್ನೆಯಿಲ್ಲದ,ನಾಳೆಯಿಲ್ಲದ, ಕಾಲವನ್ನು ಬದುಕನ್ನೂ ಎಲ್ಲವನ್ನೂ ಮರೆತು ಕೇವಲ ಮೌನವನ್ನು ಆಲಿಸುತ್ತಾ , ಶಾಂತಿಯಿಂದ ನಿದ್ರಿಸವಂತಹಾ' ಒಂದು ಅಂತ್ಯ ಸಂಸ್ಕಾರವನ್ನಾದರೂ ಆಕೆಗೆ ನೀಡಲು ಸಾಧ್ಯವಾಗಲಿಲ್ಲವೇ? ಎಂದೂ ಉಲ್ಲೇಖಿಸಿದೆ
5. ಕಲ್ಕತ್ತಾ ಹೈಕೋರ್ಟಿ ವಿನೀತ್ ರುಹಿಯಾ ಪ್ರಕರಣದಲ್ಲಿ ಸಂವಿಧಾನದ ವಿಧಿ. 25 ರಡಿಯಲ್ಲಿ , ಅಂತ್ಯಸಂಸ್ಕಾರದ ವೇಳೆ ಉಪಸ್ಥಿತರಿರುವುದು ಮೃತರ ಕುಟುಂಬಿಕರ ಭಾವನಾತ್ಮಕ ಹಕ್ಕಾಗಿರುತ್ತದೆ. ಸರಕಾರವು ಅದನ್ನು ಗೌರವಿಸಬೇಕು.
6. ದಲಿತ ಮತ್ತು ದಮನಿತರ ಹಕ್ಕುಗಳ ನಿರಾಕರಣೆಯಾದಾಗ ವಿಶೇಷ ಮುತುವರ್ಜಿವಹಿಸಿ ತನಿಖೆ ನಡೆಸುವುದು ಸರಕಾರದ ಮತ್ತು ನ್ಯಾಯಾಲಗಳ ಆಧ್ಯ ಕರ್ತವ್ಯವಾಗಬೇಕು. ಈ ಪ್ರಕರಣದಲ್ಲಿ ಸರಕಾರಿ ಅಧಿಕಾರಿಗಳು ಮನಬಂದಂತೆ ತೀರ್ಮಾನ ಕೈಗೊಳ್ಳಲು ಮೃತಳ ಕುಟುಂಬಿಕರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳೇ ಕಾರಣವಾದವೇ?
7. ಬಾಲಕಿಯ ಮೇಲೆ ನಡೆದ ದೌರ್ಜನ್ಯಕ್ಕೆ ನ್ಯಾಯಪೀಠವು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ ಮತ್ತು ಸರಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದ್ದರೂ ನ್ಯಾಯಪೀಠವು ಅಗತ್ಯ ಕಂಡು ಬಂದರೆ ಭವಿಷ್ಯದಲ್ಲಿ ಸ್ವತಂತ್ರ ತನಿಖಾ ತಂಡದ ಮೂಲಕ ಪರಿವೀಕ್ಷಿಸುವ ನಿರ್ಧಾರವನ್ನೂ ವ್ಯಕ್ತಪಡಿಸಿದೆ.
8. ಲಕ್ನೋದಲ್ಲಿರುವ ಹಿರಿಯ ಪೋಲಿಸ್ ಅಧಿಕಾರಿಗಳೇ ರಾತೋರಾತ್ರಿ ನಡೆದ ಅಂತ್ಯಸಂಸ್ಕಾರದ ಭಾಗವಾಗಿರುವ ಕಾರಣ ಲಕ್ನೋ ನ್ಯಾಯಪೀಠವು ತನಿಖೆ ಮತ್ತು ಪ್ರಕರಣದಲ್ಲಿ ಸಂಜ್ಞೇಯತೆಯನ್ನು ತೆಗೆದುಕೊಳ್ಳುವಲ್ಲಿ ತನ್ನ ಅಧಿಕಾರವ್ಯಾಪ್ತಿಯನ್ನು ಸಮರ್ಥಿಸಿಕೊಂಡಿದೆ.
9. 'ಗೌರವಾನ್ವಿತ ಅಂತ್ಯಸಂಸ್ಕಾರ/ದಫನದ ಹಕ್ಕು' ಎಂಬ ಉಲ್ಲೇಖದೊಂದಿಗೆ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದಾಖಲಿಸಲು ಹೈಕೋರ್ಟ್ ರಿಜಿಸ್ತ್ರಿಗೆ ಆದೇಶ ನೀಡಿದೆ.
10. ಉತ್ತರ ಪ್ರದೇಶ ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿಗಳು(ಗೃಹ ಇಲಾಖೆ), ಪೋಲಿಸ್ ಮಹಾ ನಿರ್ದೇಶಕರು, ಲಕ್ನೋ ಪೋಲಿಸು ಉಪ ನಿರ್ದೇಶಕರು, ಲಕ್ನೊ ಜಿಲ್ಲಾ ದಂಡಾಧಿಕಾರಿ, ಹಥ್ರಾಸ್ ಪೋಲಿಸ್ ಅಯುಕ್ತರು, ಮೊದಲಾದವರನ್ನು ನ್ಯಾಯಪೀಠವು ಪ್ರತಿವಾದಿಗಳನ್ನಾಗಿ ದಾಖಲಿಸಿ ನೋಟಿಸು ನೀಡಲು ಆದೇಶಿಸಿದೆ.
11. ವಕೀಲರಾದ ಜೈದೀಪ್ ನರೈನ್ ಮಾಥುರ್ ಮತ್ತು ಅಭಿನವ್ ಭಟ್ಟಾಚಾರ್ಯರನ್ನು ನ್ಯಾಯಮಿತ್ರರನ್ನಾಗಿ ನೇಮಕಗೊಳಿಸಿ ನ್ಯಾಯಪೀಠಕ್ಕೆ ಈ ಪ್ರಕರಣದ ತನಿಖೆಯಲ್ಲಿ ಸಹಾಯ ಮಾಡಲು ಕೋರಿದೆ
12. ಸುದ್ದಿಯನ್ನು ಪ್ರಸಾರ ಮಾಡಿದ್ದ ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್ ಪ್ರೆಸ್, ಹಿಂದೂಸ್ತಾನ್ ಟೈಮ್ಸ್, ಅಮರ್ ಉಜಾಲ ಹಾಗೆಯೇ ಟಿವಿ ವಾಹಿನಿಗಳಾದ ಇಂಡಿಯಾ ಟಿವಿ, ಆಜ್ ತಕ್, ಎನ್ ಡಿ ಟಿವಿ, ಟಿವಿ ಟುಡೆ ಮೊದಲಾದವರ ವಿಳಾಸ ಪಡೆದುಕೊಂಡು ಅವರಿಂದ ಸೂಕ್ತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ವಿನಂತಿಸಲು ಲಕ್ನೋ ವಾರ್ತಾ ಇಲಾಖೆಯ ನಿರ್ದೇಶಕರಿಗೆ ಆದೇಶಿಸಿದೆ.
13.. 12. 10 2020 ರಂದು ಎಲ್ಲಾ ಪ್ರತಿವಾದಿಗಳು ನ್ಯಾಯಪೀಠದೆದುರು ಹಾಜರಾಗಿ ಪ್ರಕರಣದಲ್ಲಿ ಕೈಗೊಂಡ ತನಿಖಾ ಕ್ರಮದ ಬಗ್ಗೆ ವಿವರಣೆ ನೀಡಲು ಆದೇಶಿದೆ
14. ಹಾಗೆಯೇ ಮೃತಳ ಕುಟುಂಬಸ್ಥರಾದ, ತಂದೆ, ತಾಯಿ , ಸೋದರ ಸೋದರಿಯರನ್ನು ನ್ಯಾಯಪೀಠದೆದುರು ಹಾಜರಿರುವಂತೆ ಖಚಿತ ಪಡಿಸಲು ಹಥ್ರಾಸ್ ಜಿಲ್ಲಾ ನ್ಯಾಯಾಧೀಶರಿಗೆ ಆದೇಸಿದೆ.
ಹಾಗೆಯೇ ಅಂದು ಹಾಜರಾಗಲಿರುವ ಕುಟುಂಬಿಕರ ಪ್ರಯಾಣ , ಊಟ ,ವಸತಿ, ರಕ್ಷಣೆಯನ್ನು ಸಂಪೂರ್ಣವಾಗಿ ವಹಿಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ.
15. ಮೃತಳ ಕುಟಂಬಸ್ಥರ ಮೇಲೆ ಯಾವುದೇ ರೀತಿಯ ಬೆದರಿಕೆ, ಬಲವಂತ ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದೆ.
ಕೊನೆಯದಾಗಿ ಇವೆಲ್ಲವೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರವೊಂದು ನಿರ್ವಹಿಸಬೇಕಾಗಿದ್ದ ಕರ್ತವ್ಯವಾಗಿತ್ತು. ಆದರೆ ಸರಕಾರವು ಸಂಪೂರ್ಣವಾಗಿ ನಿಷ್ಕ್ರಿಯಗೊಂದ ಸಂದರ್ಭದಲ್ಲಿ ನ್ಯಾಯಾಲಯವು ಶಾಸಕಾಂಗ ಮತ್ತು ಕಾರ್ಯಾಂಗದ ಕರ್ತವ್ಯಗಳನ್ನೂ ವಹುಸಿಕೊಳ್ಳಬೇಕಾಗಿ ಬಂದಿರುವುದು ಒಂದು ಕ್ಷೀಣ ಆಶಾವಾದದಂತೆ ಕಂಡು ಬಂದರೂ ಇದು ಡೆಮಾಕ್ರಸಿಯ ವಿಶಾಲ ಅರ್ಥದಲ್ಲಿ ಒಂದು ಪರಮ ವೈಫಲ್ಯವೇ ಆಗಿದೆ.
-- ಪುನೀತ್ ಅಪ್ಪು
#ಕೇವಿಯೆಟ್
02-10-2020


Comments
Post a Comment