ಕಟಕಟೆಯಲ್ಲಿ ಕಥೆಗಾರ : ಮಂಟೋ
ಕಟಕಟೆಯಲ್ಲಿ ಕಥೆಗಾರ -- ಮಂಟೊ
-- ಸಾದತ್ ಹಸನ್ ಮಾಂಟೋ, ತಾನು ಬರೆದ ಕಥೆ 'ಥಂಡಾ ಗೋಶ್ತ್' (ತಣ್ಣನ್ನ ಮಾಂಸ) ವಿರುದ್ಧ ಎದುರಿಸಿದ ಕೋರ್ಟ್ ಮೊಕದ್ದಮೆಯ ಕುರಿತು.
ಅದು 1948 ನೇ ಇಸವಿಯ ಜನವರಿ 7 ಅಥವಾ 8 ನೇ ತಾರೀಖಾಗಿರಬಹುದು. ನಾನು ಮುಂಬಯಿಯಿಂದ ಲಾಹೋರಿಗೆ ಬಂದವನು ಕರಾಚಿಯಲ್ಲಿ ಕೆಲವು ದಿನಗಳವರೆಗೆ ಉಳಿದುಕೊಂಡಿದ್ದೆ. ಗೊತ್ತುಗುರಿಯಿಲ್ಲದೆ ಬದುಕಿದ್ದೆ. ನಾನೆಲ್ಲಿದ್ದೇ ?, ಮುಂಬಯಿಯಲ್ಲೇ?, ಕರಾಚಿಯಲ್ಲಿರುವ ನನ್ನ ಸ್ನೇಹಿತ ಹಸನ್ ಅಬ್ಬಾಸನ ಮನೆಯಲ್ಲೇ?, ಅಥವಾ ಖೈದ್- ಏ - ಅಝಾಮ್ ರ (ಮೊಹಮ್ಮದ್ ಆಲಿ ಜಿನ್ನಾ) ಪರಿಹಾರ ನಿಧಿಯ ಸಂಗ್ರಹಕ್ಕಾಗಿ ನಡೆಯುತ್ತಿದ್ದ ಸಂಗೀತ ಸಂಜೆಗಳು ನಡೆಯುತ್ತಿದ್ದ ಲಾಹೋರಿನ ಯಾವುದೋ ಹೊಟೇಲುಗಳಲ್ಲಿಯೇ?
ಏನಾದರೂ ಬರೆಯಲೆಂದು ಕುಳಿತುಕೊಂಡರೆ ವಿಚಾರಗಳೆಲ್ಲವೂ ದಿಕ್ಕೆಟ್ಟುಹೋಗುತ್ತಿದ್ದವು. ನಾನೆಷ್ಟೇ ಪ್ರಯತ್ನಿಸಿದರೂ ಭಾರತವನ್ನು ಪಾಕಿಸ್ಥಾನದಿಂದಾಗಲೀ , ಪಾಕಿಸ್ಥಾನವನ್ನು ಭಾರತದಿಂದಾಗಲೀ ಬೇರ್ಪಡಿಸಲು ನನ್ನಿಂದ ಸಾಧ್ಯವಾಗಲೇ ಇಲ್ಲ. ಒಂದೇ ಪ್ರಶ್ನೆ ನನ್ನ ಮನಸ್ಸಿನಲ್ಲಿ ಪುನರಾವರ್ತನೆಯಾಗುತ್ತಲೇ ಇತ್ತು. ಪಾಕಿಸ್ಥಾನೀ ಸಾಹಿತ್ಯವೆಂಬುದು ಬೇರೆಯದೇ ? ಒಂದು ವೇಳೆ ಹೌದೆಂದಾಗಿದ್ದರೆ ಅದು ಯಾವ ತರಾ? ಅವಿಭಜಿತ ಭಾರತದಲ್ಲಿದ್ದ ಸಾಹಿತ್ಯದ ವಾರೀಸುದಾರರು ಯಾರು? ಅಥವಾ ಸಾಹಿತ್ಯವೂ ವಿಭಜನೆಯಾಗಿದೆಯೇ ? ಭಾರತೀಯರ ಮೂಲ ಸಮಸ್ಯೆಗಳು ಒಂದೇ ರೀತಿಯದಾಗಿರಲಿಲ್ಲವೇ? ಉರ್ದು ಆ ಕಡೆಯಿಂದ ಮಾಯವಾಗಲಿದೆಯೇ ? ಪಾಕಿಸ್ಥಾನದಲ್ಲಿ ಅದು ಯಾವ ರೂಪವನ್ನು ಪಡೆಯಲಿದೆ? ನಮ್ಮ ದೇಶವು ಧರ್ಮಾಧಾರಿತವಾಗಲಿದೆಯೇ? ಈ ಸರಕಾರದ ಭಾಗವಾಗುವುದೆಂದರೆ ಈ ಸರಕಾರವನ್ನು ಟೀಕಿಸುವಿಕೆಯನ್ನೂ ಒಳಗೊಂಡಿರುವುದೇ? ಇಂದು ನಾವು ಸ್ವತಂತ್ರರಾಗಿದ್ದೇವೆ, ಅಂದರೆ ಎಲ್ಲಾ ವಿಷಯಗಳು ಬ್ರಿಟೀಷರ ಆಡಳಿತಕ್ಕಿಂತ ಬೇರೆಯದೇ ಆಗಲಿವೆಯೇ ?
ನನ್ನ ಸುತ್ತಮುತ್ತಲ್ಲೆಲ್ಲಾ ಇಂತಹ ಗೊಂದಲಗಳೇ ಕಾಣ ಸಿಗುತ್ತಿದ್ದವು. ಕೆಲವು ಜನ ತುಂಬಾ ಸಂತೋಷದಿಂದ ಇದ್ದರು. ಯಾಕೆಂದರೆ ರಾತ್ರಿ ಬೆಳಗಾಗುವುದರೊಳಗೆ ಅವರೆಲ್ಲಾ ಶ್ರೀಮಂತರಾಗಿದ್ದರು. ಆದರೂ ಆ ಸಂತೋಷದೊಳಗೊಂದು ಖಾಲಿತನವಿತ್ತು. ಇದೂ ಹೆಚ್ಚು ದಿನ ಬಾಳಲಾರದು ಎಂದು ಹೇಳುವಂತಿತ್ತು. ಕೆಲವು ಜನರು ವ್ಯಗ್ರಗೊಂಡಿದ್ದರು. ಏಕೆಂದರೆ ಅವರು ಆ ಕಡೆಯಲ್ಲಿ ಎಲ್ಲವನ್ನೂ ಬಿಟ್ಟು ಬರಿ ಕೈಯ್ಯಲ್ಲಿ ಈ ಕಡೆಗೆ ಬಂದಿದ್ದರು.
ನನ್ನ ಗೆಳೆಯ ಅಹಮ್ಮದ್ ನದೀಮ್ ಖಾಸಿಮೀ ರೇಡಿಯೋ ಪಾಕಿಸ್ಥಾನಕ್ಕೆ ಅಸಂಗತ, ಗೊತ್ತುಗುರಿಯಿಲ್ಲದ ವಿಷಯಗಳನ್ನು ಬರೆದೂ ಬರೆದೂ ಸಾಕಾಗಿ ಕೊನೆಗೂ ಪೇಷಾವರದಿಂದ ವಾಪಾಸಾಗಿದ್ದ. ಆತ ಲಾಹೋರಿನಿಂದ 'ನಖೂಶ್ 'ಎಂಬ ಸಾಹಿತ್ಯಿಕ ಮಾಸಿಕವೊಂದನ್ನು ತರಲು ನಿರ್ಧರಿಸಿದ್ದ. ನಾನು ಪಾಕಿಸ್ಥಾನಕ್ಕೆ ತೆರಳಿದ ನಂತರ ಮೊದಲ ಕಥೆಯನ್ನು ಆ ಮಾಸಿಕಕ್ಕೆ ಬರೆದಿದ್ದೆ. ಅದು 'ಥಂಡಾ ಗೋಶ್ತ್' . ಖಾಸಿಮಿ ನನ್ನನ್ನು ಬೇಟಿಯಾಗಲು ಬಂದಿದ್ದಾಗ ನಾನು ಆ ಹಸ್ತಪ್ರತಿಯನ್ನು ಆತನ ಕೈಗಿತ್ತಿದ್ದೆ. ಆತ ನನ್ನ ಮುಂದೆ ಖುರ್ಚಿಯಲ್ಲಿ ಕುಳಿತ್ತಿದ್ದವನೇ ಆ ಕಥೆಯನ್ನು ಕೊನೆಯವರೆಗೆ ಒಂದೇ ಉಸಿರಿನಲ್ಲಿ ಓದಿಬಿಟ್ಟ. ಕೊನೆಗೆ ಕ್ಷಮೆಯಾಚಿಸುವವನಂತೆ, ' ಮಾಂಟೋ ಸಾಹಿಬ್, ಕಥೆ ಅದ್ಭುತವಾಗಿದೆ, ಅದರೇ, ಇದು 'ನಾಖೂಶ್' ಗೆ ಮಾತ್ರ ಸ್ವಲ್ಪ ಜಾಸ್ತಿಯೇ 'ಬಿಸಿ'ಯಾಗಿರುವಂತಿದೆ' ಎಂದ. ನಾನು ಮರುಮಾತಾಡದೆ ಆತನ ಕೈಯಿಂದ ಹಸ್ತಪ್ರತಿಯನ್ನು ಪಡೆದುಕೊಂಡು ಸ್ವಲ್ಪ ಕಡಿಮೆ ಬಿಸಿಯಿರುವ ಬರಹವನ್ನು ಪತ್ರಿಕೆಗೆ ಬರೆದುಕೊಡುವೆನೆಂಬ ಭರವಸೆಯಿತ್ತು ಆತನನ್ನು ಬೀಳ್ಕೋಟ್ಟೆ.
ಆತ ಮರುದಿನ ಮತ್ತೆ ಬಂದ. ಆತ ಒಳಗೆ ಬರುತ್ತಿದ್ದಾಗ, ನಾನು ನನ್ನ 'ಖೋಲ್ ದೋ' (ತೆರೆದು ಬಿಡು) ಕಥೆಯ ಕೊನೆಯ ಸಾಲುಗಳನ್ನು ಬರೆಯುತ್ತಿದ್ದೆ. ಖಾಸಿಮಿ ಕಥೆಯನ್ನು ಓದಿದ ಮತ್ತು ಆತ ಭಾವುಕನಾದುದನ್ನು ನಾನು ಗಮನಿಸಿದೆ. ಆತ ಆ ಕಥೆಯನ್ನು ತನ್ನ ಮೂರನೇ ಸಂಚಿಕೆಯಲ್ಲಿ ಪ್ರಕಟಿಸಿದ, ಆದರೆ ಸರಕಾರಕ್ಕೆ ಅದು ಇಷ್ಟವಾಗಲಿಲ್ಲ, ಆ ಕಥೆ 'ಸಾರ್ವಜನಿಕ ನೆಮ್ಮದಿಗೆ ವಿರುದ್ಧವಾಗಿದೆ' ಎಂದು ತೀರ್ಮಾನಿಸಿತು. ಹಾಗೆಯೇ 'ನಾಖೂಶ್' ಪತ್ರಿಕೆಯನ್ನು ಆರು ತಿಂಗಳವರೆಗೆ ಮುಚ್ಚಬೇಕೆಂದು ಆದೇಶ ಬಂತು. ಪತ್ರಿಕೆಗಳಲ್ಲಿ ಸರಕಾರದ ಈ ನಿರ್ಧಾರವನ್ನು ಖಂಡಿಸಿ ಹಲವಾರು ಚರ್ಚೆಗಳೂ ನಡೆದವು ಆದರೆ ಅದರಿಂದ ಅಂತಹ ಪರಿಣಾಮಗಳೇನೂ ಆಗಲಿಲ್ಲ.
ಕೆಲವು ದಿನಗಳ ನಂತರ, ನಾನು 'ತಣ್ಣನ್ನ ಮಾಂಸ ' ಕಥೆಯನ್ನು 'ಆದಾಬ್-ಏ -ಲತೀಫ್' ನ ಸಂಪಾದಕನಿಗೆ ನೀಡಿದೆ. ಅಲ್ಲಿ ಕಥೆಯನ್ನು ಕ್ಯಾಲಿಗ್ರಾಫ್ ಮಾಡಲಾಯಿತು, ಹಸ್ತಪ್ರತಿಯೂ ಓದಿಸಲ್ಪಟ್ಟು, ಮುಂದಿನ ಸಂಚಿಕೆಯಲ್ಲೇ ಪ್ರಕಟಿಸಲಾಗುವುದೆಂದೂ ತೀರ್ಮಾನವಾಯಿತು. ಆದರೆ ಕೊನೆಕ್ಷಣಗಳಲ್ಲಿ ಅವರ ಕೈಕಾಲುಗಳೂ ತಣ್ಣಗಾಗತೊಡಗಿದ ಕಾರಣ ಪತ್ರಿಕೆಯು ನನ್ನ ಕಥೆಯಿಲ್ಲದೆಯೇ ಹೊರಬಂತು. ಹಸ್ತಪ್ರತಿಯು ನನ್ನ ಬಳಿಗೆ ವಾಪಾಸಾಯಿತು. ( ಕರಾಚಿಯ ಪತ್ರಿಕೆ 'ನಯಾ ದೌರ್' ನ ಸಂಪಾದಕನೂ ಕಥೆಯನ್ನು ಓದಿದ್ದ ಆದರೆ ಆತ ಅದನ್ನು ಬಳಸಿಕೊಳ್ಳುವುದು ಬೇಡವೆಂದು ತೀರ್ಮಾನಿಸಿಬಿಟ್ಟಿದ್ದ).
'ನಾಖೂಶ್' ಪತ್ರಿಕೆಯ ಮೇಲಿನ ನಿಷೇದವನ್ನು ಸರಕಾರವು ಆರು ತಿಂಗಳ ಅವಧಿಗಿಂತ ಮೊದಲೇ ತೆರವುಗೊಳಿಸಿತ್ತು. ನಾನು ನನ್ನ ಎಲ್ಲಾ ಕಥೆಗಳನ್ನು ಸೇರಿಸಿ ಒಂದು ಸಂಕಲನವನ್ನು ಸಿದ್ಧಪಡಿಸಿದ್ದೆ. ಅದರಲ್ಲಿ 'ಖೋಲ್ ದೋ' ಮತ್ತು 'ಥಂಡಾ ಗೋಶ್ತ್' ಕಥೆಗಳೂ ಸೇರ್ಪಡೆಯಾಗಿದ್ದವು. ಅದೇ ಸಮಯದಲ್ಲಿ ಆರೀಫ್ ಅಬ್ದುಲ್ ಮಾತೀನ್ 'ಜಾವೇದ್' ಎಂಬ ಒಂದು ಹೊಸ ಪತ್ರಿಕೆಯಲ್ಲಿ ಸಂಪಾದಕನಾಗಿ ಸೇರಿಕೊಂಡಿದ್ದ. ಆತನಿಗೆ 'ಥಂಡಾ ಗೋಶ್ತ್' ಬಗ್ಗೆ ತಿಳಿದಿದ್ದುದರಿಂದ ಆ ಕಥೆಯನ್ನು ತನ್ನ 'ಜಾವೇದ್' ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ದುಂಬಾಲು ಬಿದ್ದ. ಸಾಕಷ್ಟು ಹಿಂಜರಿಕೆಯ ನಂತರ ಪ್ರಕಟಿಸಲು ಅನುಮತಿ ಕೊಟ್ಟೆ. ಅದು 1949ರ ಮಾರ್ಚ್ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಯಿತು.
'ಜಾವೇದ್' ಪತ್ರಿಕೆಯು ಪಾಕಿಸ್ಥಾನ ಮತ್ತು ಭಾರತ ಎರಡೂ ದೇಶಗಳಲ್ಲಿಯೂ ತನ್ನ ಏಜೆಂಟರುಗಳ ಮೂಲಕ ಪ್ರಸರಣವನ್ನು ಹೊಂದಿತ್ತು. ಪ್ರಕಟನೆಯ ನಂತರ ಅಂತಹದ್ದೇನೂ ನಡೆಯಲಿಲ್ಲ. ಎಲ್ಲವೂ ಸರಿಯಾಯಿತು ಎಂದು ನನಗೂ ಸಮಾಧಾನವಾಯಿತು. ಆದರೆ ನಾನು ಎಣಿಕೆ ತಪ್ಪಾಗಿತ್ತು. ಒಂದು ದಿನ ಪತ್ರಿಕಾ ಕಚೇರಿಗೆ ಪೋಲಿಸರು ದಾಳಿ ನಡೆಸಿ ಮಾರ್ಚ್ ತಿಂಗಳ ಎಲ್ಲಾ ಪ್ರತಿಗಳನ್ನು ಮುಟ್ಟುಗೋಲು ಹಾಕಿದ್ದಾರೆಂಬ ಗಾಳಿ ಸುದ್ದಿ ಹರಡಿತು. ಸರಕಾರವು ಈ ವಿಷಯವನ್ನು ಪತ್ರಿಕಾ ಸಲಹಾ ಮಂಡಳಿಗೆ ವಹಿಸಿತು. ಪಾಕಿಸ್ಥಾನ್ ಟೈಮ್ಸಿನ ಸಂಪಾದಕ ಫೈಝ್ ಅಹಮ್ಮದ್ ಫೈಜ್ ಪತ್ರಿಕಾ ಸಲಹಾ ಮಂಡಳಿಯ ಚೇರ್ಮನ್ ಆಗಿದ್ದ. 'ಜಾವೇದ್' ನ ಮುಖ್ಯಸ್ಥ ನಾಸೀರ್ ಅನ್ವರನ ಪ್ರಕಾರ ನನ್ನ ಕಥೆಯನ್ನು 'ಅಶ್ಲೀಲ' ಎಂದು ತೀರ್ಮಾನಿಸಿದ್ದು ಚೌದರಿ ಮುಹಮ್ಮದ್ ಹುಸೈನ್, ಆತ ಸರಕಾರಿ ವಾರ್ತಾ ಇಲಾಖೆಯ ಪಂಜಾಬ್ ಶಾಖೆಯ ಮುಖ್ಯಸ್ಥನಾಗಿದ್ದ.
ಫೈಝ್ ಅದು ತನ್ನ ತೀರ್ಮಾನವಾಗಿರಲಿಲ್ಲ ಆದರೆ 'ಝಮೀನ್ದಾರ್' ಪತ್ರಿಕೆಯ ಸಂಪಾದಕನಾಗಿದ್ದ ಮೌಲಾನಾ ಅಖ್ತರ್ ಆಲೀ ಖಾನನ ನಿರ್ಧಾರವಾಗಿತ್ತು ಆದರೆ ಆತ ಎದುರು ಬೀಳಲು ಸಿದ್ಧನಿರಲಿಲ್ಲ, ಮತ್ತು 'ಇಂತಹ ಸಾಹಿತ್ಯವೊಂದು ಪಾಕಿಸ್ಥಾನದಲ್ಲಿ ಬೆಳೆಯಲು ಬಿಡಬಾರದು ' ಎಂದ. ಸಿವಿಲ್ ಮತ್ತು ಮಿಲಿಟರಿ ಗಜೆಟಿನ ಸಂಪಾದಕರಾಗಿದ್ದ ಎಫ್. ಡಬ್ಲ್ಯೋ. ಬುಸ್ಟನ್ ನಿಗೆ ಓದಲು ಸುಲಭವಾಗುವಂತೆ ಚೌಧರಿ ಮುಹಮ್ಮದ್ ಹುಸೈನ್ 'ಥಂಡಾ ಗೋಶ್ತ್ 'ಕಥೆಯ ಒಂದು ವಿಚಿತ್ರವಾದ ಅನುವಾದವನ್ನು ಮಾಡಿದ್ದ. ಅದರ ಪ್ರಕಾರ 'ಪಾಕಿಸ್ಥಾನಿ ಮುಸ್ಲೀಮರಿಗೆ ಗೌರವವೇ ಇಲ್ಲ, ಅವರ ಸತ್ತ ಹೆಣ್ಣುಗಳನ್ನೂ ಸಿಖ್ಖರು ಅತ್ಯಾಚಾರ ಮಾಡಬಹುದಿತ್ತು' ಎಂಬ ರೀತಿಯಲ್ಲಿತ್ತು.
ಕೊನೆಗೆ ಪ್ರಕರಣವನ್ನು ನ್ಯಾಯಾಲಯದ ಮುಂದೆ ಇಡುವಂತೆ ತೀರ್ಮಾನಿಸಲಾಯಿತು.
ಕೆಲವು ದಿನಗಳ ನಂತರ 'ಜಾವೇದ್' ಪತ್ರಿಕೆಯ ಮುಖ್ಯಸ್ಥ ನಾಸೀರ್ ಹುಸೈನ್, ಸಂಪಾದಕ ಆರೀಫ್ ಅಬ್ದುಲ್ ಮಾತೀನ್ ಮತ್ತು ನನ್ನ ವಿರುದ್ಧ ಬಂಧನ ಆದೇಶ ಜಾರಿಯಾಯಿತು. ನನ್ನನ್ನು ಬಂಧಿಸಲೆಂದು ನಿಯೋಜಿತನಾಗಿದ್ದ ಪೋಲಿಸ್ ಇನ್ಸ್ಪೆಕ್ಟರ್ ಒಳ್ಳೆಯ ಮನುಷ್ಯನಂತೆ ಕಂಡುಬಂದ. ಆತನ ಹೆಸರು ಚೌಧರಿ ಖುದಾ ಬಕ್ಷ್. ಆತ ಎರಡು ಮೂರು ಸಲ ನನ್ನ ಮನೆಯ ಕಡೆಗೆ ಎಡತಾಕಿದ. ನಾನು ಯಾವಾಗಲೂ ಮನೆಯಿಂದ ಹೊರಗೆಯೇ ಇರುತ್ತಿದ್ದೆ. ಕೊನೆಗೊಮ್ಮೆ ನನ್ನನ್ನು ಬೇಟಿಯಾದಾಗ ಆತ ವಿನಯಪೂರ್ವಕವಾಗಿಯೇ ಮಾತನಾಡಿಸಿದ, 'ದಯವಿಟ್ಟು ಸಿವಿಲ್ ಲೈನ್ಸ್ ಪೋಲಿಸು ಠಾಣೆಗೆ ಬನ್ನಿ, ಬರುವಾಗ ನಿಮಗೆ ಜಾಮೀನು ನಿಲ್ಲಬಲ್ಲಂತಹ ಸ್ನೇಹಿತನೊಬ್ಬನನ್ನೂ ಕರೆತನ್ನಿ' ಎಂದ. ಇದುವರೆಗೆ ನಾನು ಕಂಡಿದ್ದ ಪೋಲಿಸರಲ್ಲಿಯೇ ಈತ ತುಸು ಭಿನ್ನವಾಗಿ ಕಂಡಿದ್ದ.
ಮರುದಿನ ಬೆಳಿಗ್ಗೆಯೇ ಮಿತ್ರ ಸಲೀಮ್ ಶೇಖ್ ಜೊತೆಗೆ ನಾನು ಪೋಲಿಸು ಠಾಣೆಗೆ ಹೊರಟಿದ್ದೆ. ಆತ ನನಗೆ ಜಾಮೀನುದಾರನಾಗಿ ನಿಂತಿದ್ದ. ಅಲ್ಲಿಗೆ ಒಂದನೇ ಹಂತ ಮುಗಿದಿತ್ತು. ಕೆಲವು ದಿನಗಳ ನಂತರ ನ್ಯಾಯಾಲಯದಿಂದ ಮುಂದಿನ ವಿಚಾರಣೆಗೆ ತಾರೀಖು ನಿಗದಿಗೊಳಿಸಿ ನಮಗೆ ಸಮನ್ಸ್ ಹೊರಡಿಸಲಾಯಿತು. ನಾವು ಮೂವರೂ ಕೂಡಾ - ಅಂದರೆ, ನಾಸೀರ್, ಆರೀಫ್ ಮತ್ತು ನಾನು ಜಿಲ್ಲಾ ನ್ಯಾಯಾಲಯದತ್ತ ಆಗಮಿಸಿದ್ದೆವು. ಅದಾಗಲೇ ಇಂತಹುದೇ ಆರೋಪದಲ್ಲಿ ಮೂರು ಸಲ ಹಾಜರಾಗಿದ್ದುದರಿಂದ ಆ ನ್ಯಾಯಾಲಯಕ್ಕೆ ನಾನು ಅಪರಿಚಿತನೇನೂ ಆಗಿರಲಿಲ್ಲ.
ನಮ್ಮ ವಕೀಲರಾಗಿದ್ದ ತಸ್ಸದುಕ್ ಹುಸೈನ್ ಖಾಲಿದ್ ಬಂದ ನಂತರ ನಾವೆಲ್ಲರೂ ಆತನ ಹಿಂದೆ ಕೋರ್ಟಿನ ಕಡೆಗೆ ಮೆರವಣಿಗೆಯಲ್ಲಿ ಸಾಗಿದಂತೆ ನಡೆದೆವು. ಅಲ್ಲಿ
ಪಾಕಿಸ್ತಾನಿ ನಾಗರೀಕ ಸೇವೆಯ ಮಿಯಾ ಎ.ಎಮ್ ಸಯೀದ್ ಪ್ರಥಮ ದರ್ಜೆಯ ಮ್ಯಾಜಿಸ್ಟ್ರೇಟ್ ಆಗಿದ್ದ. ಒಂದು ಸಂದರ್ಭದಲ್ಲಿ ಆತ ಸೇನೆಯ ಕ್ಯಾಪ್ಟನ್ ಆಗಿದ್ದ, ಆದರೆ ನಂತರದ ದಿನಗಳಲ್ಲಿ ಆತನ ಕೈಯ್ಯಿಂದ ಸೇನೆಯ ಕೋವಿಯನ್ನು ಹಿಂಪಡೆದುಕೊಂಡು ನ್ಯಾಯದ ತಕ್ಕಡಿಗಳನ್ನು ನೀಡಲಾಗಿತ್ತು. ನಾವು ಕೋರ್ಟಿನ ಒಳಕ್ಕೆ ಹೋದಾಗ ಆತ ನಮ್ಮತ್ತ ನೋಡಲಿಲ್ಲ ಆದರೆ ನಮ್ಮ ವಕೀಲರ ಬಳಿ ಏನೋ ಮಾತನಾಡಿದ. ನಮ್ಮ ಜಾಮೀನುಗಳು ಖಾತರಿಗೊಂಡು ಮುಂದಿನ ವಿಚಾರಣೆಗಾಗಿ ದಿನಾಂಕವು ನಿಗದಿಯಾಯಿತು. ನಾವು ತಲೆಬಾಗಿಸಿ ನ್ಯಾಯಾಲಯಕ್ಕೆ ಗೌರವಕೊಟ್ಟು ಅಲ್ಲಿಂದ ನಿರ್ಗಮಿಸಿದೆವು. ಆರೀಫ್ ಅಬ್ದುಲ್ ಮಾತೀನ್ ತುಂಬಾ ಮುಜುಗರಕ್ಕೊಳಗಾಗಿದ್ದ. ಕಮ್ಯೂನಿಸ್ಟ್ ಪಕ್ಷದ ಸದಸ್ಯನೊಬ್ಬ ಆ ಸಂದರ್ಭದಲ್ಲಿ ಹೇಗೆ ಕಾಣಿಸುತ್ತಿದ್ದನೋ ಹಾಗೆಯೇ ಆತ ನನಗೆ ಕಾಣಿಸಿದ್ದ.
ನಾವು ನಂತರ ಎರಡು ಮೂರು ಸಲ ನ್ಯಾಯಾಲಯಕ್ಕೆ ಹಾಜರಾದೆವು ಆದರೆ ಪ್ರತೀ ಸಲವೂ ವಿಚಾರಣೆಯು ಮುಂದೂಡಲ್ಪಡುತ್ತಿತ್ತು. ಹವಾಮಾನವು ಸಹಿಸಲಾರದಷ್ಟು ಬಿಸಿಯಾಗುತ್ತಿತ್ತು ಆದರೆ ನಮಗೆ ನ್ಯಾಯಾಲಯದ ಬಾಗಿಲಲ್ಲಿ ಎಡತಾಕಿಕೊಂಡು ನಮ್ಮ ಸರದಿಗೆ ಕಾಯುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ.
ಒಂದು ವೇಳೆ ನ್ಯಾಯಾಲಯಕ್ಕೆ ಹಾಜರಾಗಲು ತಪ್ಪಿದ್ದಲ್ಲಿ ನ್ಯಾಯಾಧೀಶನ ಆಕ್ರೋಶವು ನಮ್ಮ ಮೇಲೆ ಬಂದೆರಗಬಹುದೆಂಬ ಭಯವೂ ನಮಗಿತ್ತು. ಬೇಕಿದ್ದರೆ ನಾವು ನಮ್ಮ ಪ್ರಕರಣವನ್ನು ವರ್ಗಾವಣೆ ಮಾಡಲು ಅರ್ಜಿ ಸಲ್ಲಿಸಬಹುದೆಂಬ ಸಲಹೆಯನ್ನು ನಮ್ಮ ವಕೀಲರು ನೀಡಿದರು. ನಾನು ಮಾತ್ರ ಅದಕ್ಕೆ ಒಪ್ಪಲಿಲ್ಲ, 'ಬೇರೆ ಕೋರ್ಟಿನಲ್ಲೇನು ನಮಗೆ ಸಿಹಿತಿಂಡಿ ಕೊಟ್ಟು ಸ್ವಾಗತಿಸುತ್ತಾರೆಯೇ? ಎಲ್ಲಿ ಏನಾಗುವುದೋ ಅದೇ ಆಗಲಿ ' ಎಂದೆ.
ನನಗೆ ಭಾರತದ ಅಪರಾಧ ಸಂಹಿತೆಯ ಕಲಂ 292ರಡಿಯಲ್ಲಿ ದೋಷಾರೋಪಣೆ ಮಾಡಲಾಗಿತ್ತು. ಹಾಗೆಯೇ ನಾವೆಲ್ಲರೂ ನಮ್ಮ ಪರ ಡಿಫೆನ್ಸ್ ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದೂ ಹೇಳಲಾಯಿತು. ನಾನು ಮೊದಲೇ 35 ಜನರ ಹೆಸರುಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೆ. ಆದರೆ ನ್ಯಾಯಾಧೀಶ ಆ ಪಟ್ಟಿಯನ್ನು ನೋಡಿ ಕೋಪಗೊಂಡ. 'ಇಷ್ಟು ದೊಡ್ಡ ಗುಂಪನ್ನು ನ್ಯಾಯಾಲಯಕ್ಕೆ ಕರೆತರಲು ಅನುಮತಿ ನೀಡಲು ಸಾಧ್ಯವಿಲ್ಲ 'ಎಂದ. ಆದರೆ ಪ್ರತಿಯೊಬ್ಬ ಸಾಕ್ಷಿಯೂ ತನ್ನದೇ ಆದ ನೆಲೆಯಲ್ಲಿ ಪ್ರಮುಖವಾಗಿದ್ದಾರೆ ಎಂದು ನಾನು
ವಾದಿಸತೊಡಗಿದಾಗ ಆತ ನಕ್ಕುಬಿಟ್ಟ. ನಾವು ಸಿದ್ಧ ಪಡಿಸಿದ್ದ ಸಾಕ್ಷಿಗಳ ಪಟ್ಟಿಯಲ್ಲಿ 'ಮುಮ್ತಾಝ್ ಶಿರೀನ್ ' ಎಂಬ ಹೆಸರೂ ಇತ್ತು. ಮ್ಯಾಜಿಸ್ಟ್ರೇಟ್ ಪಟ್ಟಿಯನ್ನು ಓದುತ್ತಿದ್ದಾಗ 'ಇದ್ಯಾರಿದು ಮುಮ್ತಾಝ್ ಶಾಂತಿ' ಎಂದು ವ್ಯಂಗ್ಯವಾಗಿ ಕೇಳಿದ. ( ಮುಮ್ತಾಝ್ ಶಿರೀನ್ ಆ ಕಾಲದ ಪ್ರಸಿದ್ಧ ಬರಹಗಾರ್ತಿಯಾಗಿದ್ದರು, ಇನ್ನೊಬ್ಬರು ಅಂದರೆ ಮುಮ್ತಾಝ್ ಶಾಂತಿ ಆ ಕಾಲದ ಪ್ರಸಿದ್ಧ ಗ್ಲಾಮರಸ್ ನಟಿಯಾಗಿದ್ದರು) ಕೋರ್ಟಿನ ಕೆಲವು ಕಾರಕೂನರು ಅದನ್ನು ಹಾಸ್ಯಚಟಾಕಿಯೆಂಬಂತೆ ತಮ್ಮತಮ್ಮಲ್ಲೇ ಪಿಸಪಿಸ ಮಾಡಿಕೊಂಡು ನಕ್ಕರು. ನಾವು ಮಾತ್ರ ತುಟಿಪಿಟಕ್ಕೆನ್ನದೆ ನೆಟ್ಟಗೆ ನಿಂತುಕೊಂಡೆವು.
ಬಹಳ ಹೊತ್ತಿನ ವಾದವಿವಾದಗಳ ತರುವಾಯ ಆತ ಹದಿನಾಲ್ಕು ಜನ ಸಾಕ್ಷಿದಾರರನ್ನು ನಮ್ಮ ಪರವಾಗಿ ಹಾಜರುಪಡಿಸಲು ಒಪ್ಪಿದ. ನಾನು ಯಾವುದೇ ಸಾಕ್ಷಿಯನ್ನು ವೈಯ್ಯಕ್ತಿಕವಾಗಿ ಬೆಟ್ಟಿಯಾಗಲಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸಿದ ನಂತರ ನನಗೆ ನನ್ನ ಕಥೆಯ ನಿಲುವನ್ನು ಸಾಬೀತುಪಡಿಸುವುದು ಸಾಧ್ಯ ಎಂಬುದು ನನ್ನ ಬಯಕೆಯಾಗಿತ್ತು. ಸಮನ್ಸ್ ಸ್ವೀಕರಿಸಿದ ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯಗಳನ್ನು ಬಿಟ್ಟು ನ್ಯಾಯಾಲಯಕ್ಕೆ ಬೆಳಗ್ಗೆಯೇ ಹಾಜರಾಗಿ ತಮ್ಮ ಹೆಸರುಗಳು ಕರೆಯಲ್ಪಡುವವರೆಗೆ ಕೋರ್ಟಿನ ಬಾಗಿಲಲ್ಲೇ ಕಾಯಬೇಕಾಗಿತ್ತು. ಎಷ್ಟೋ ಸಲ ಅವರನ್ನು ಕೂಡಾ ಆರೋಪಿಗಳಂತೆ ನಡೆಸಿಕೊಳ್ಳುತ್ತಿದ್ದುದನ್ನು ನೋಡಿ ನನಗೆ ಬೇಸರವಾಯಿತು.
ನಮ್ಮ ಮಿತ್ರ ಶೇಕ್ ಸಲೀಮ್ ವಿಚಿತ್ರ ಸ್ಥಿತಿಯಲ್ಲಿದ್ದ. ಆತ ಬೆಳಿಗ್ಗೆ ಎದ್ದ ತಕ್ಷಣದಿಂದ ರಾತ್ರಿ ಮಲಗುವವರೆಗೂ ಕೈಯ್ಯಲ್ಲಿ ಮದ್ಯದ ಬಾಟಲಿಯನ್ನು ಇಟ್ಟುಕೊಂಡೇ ಇರುತ್ತಿದ್ದವನು. ಈಗಂತೂ ಆತನಿಗೆ ಕೋರ್ಟಿನ ಬಾಗಿಲಲ್ಲಿ ಕುಳಿತುಕೊಂಡು ದಿನವಿಡೀ ಆಕಳಿಸುವುದನ್ನು ಬಿಟ್ಟರೆ ಬೇರೆ ಕೆಲಸವಿರಲಿಲ್ಲ. ಕೊನೆಗೊಮ್ಮೆ ಇನ್ನು ಮುಂದೆ ಇಂತಹ ಚಿತ್ರಹಿಂಸೆಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲವೆಂಬ ತೀರ್ಮಾನಕ್ಕೆ ಬಂದುಬಿಟ್ಟ, ಒಂದು ಪುಟ್ಟ ವಿಸ್ಕಿಯ ಬಾಟಲಿಯನ್ನು ತನ್ನ ನಿಲುವಂಗಿಯ ಒಳಜೇಬಿನಲ್ಲಿ ಇಟ್ಟುಕೊಂಡೇ ನ್ಯಾಯಾಲಯಕ್ಕೆ ಬರತೊಡಗಿದ.
ಆತ ಆಗಾಗ ಒಂದೊಂದು ಗುಟುಕು ತೆಗೆದುಕೊಳ್ಳುತ್ತಿದ್ದ. ಆತನಿಗೆ ಸಾಹಿತ್ಯದ ಸಹವಾಸವೇ ಇರಲಿಲ್ಲ ಆದರೂ ಒಮ್ಮೊಮ್ಮೆ ನಮ್ಮಲ್ಲಿ ಕೇಳುತ್ತಿದ್ದ, ' ಈ ಆಶ್ಲೀಲತೆ ಅಂದ್ರೆ ಏನ್ರೋ ? ನಾನು ಮಾಂಟೋನ ಕಥೆಯನ್ನು ಓದಿಯೇ ಇಲ್ಲ, ಆದರೆ ಅದು ಆಶ್ಲೀಲವಾಗಲು ಸಾಧ್ಯವೇ ಇಲ್ಲ, ಯಾಕೆಂದರೆ ನಮ್ಮ ಮಾಂಟೋ ಒಬ್ಬ ಕಲಾವಿದ ಕಣ್ರೋ ' ಎನ್ನುತ್ತಿದ್ದ.
ಮೊದಲ ಮೂರು ಸಾಕ್ಷಿಗಳಲ್ಲಿ -- ಅಬೀದ್ ಆಲಿ ಅಬೀದ್, ಲಾಹೋರಿನ ದೈಲ್ ಸಿಂಗ್ ಕಾಲೇಜಿನ ಪ್ರೊಫೆಸರ್, ಅಹಮ್ಮದ್ ಸಯೀದ್ ಮತ್ತು ಖಲೀಫಾ ಅಬ್ದುಲ್ ಹಕೀಮ್, ಇವರು ಒಬ್ಬರ ನಂತರ ಒಬ್ಬರು ನ್ಯಾಯಾಲಯದಲ್ಲಿ ಹಾಜರಾದರು.
ಅವರ ಸುದೀರ್ಘ ವಿಮರ್ಶಾತ್ಮಕ ಹೇಳಿಕೆಗಳನ್ನು ನ್ಯಾಯಾಧೀಶರು ಕೈಬರಹದಲ್ಲಿಯೇ ದಾಖಲು ಮಾಡಬೇಕಾಗಿತ್ತು. ಆದುದರಿಂದ ಆತನ ಪಿತ್ಥವೂ ನೆತ್ತಿಗೇರಿತ್ತು. ಒಂದು ಸಂದರ್ಭದಲ್ಲಂತೂ ಆತ ' ನಾನು ಮ್ಯಾಜಿಸ್ಟ್ರೇಟ್ ಇದ್ದೀನಿ, ಗುಮಾಸ್ತನಲ್ಲ' ಎಂದೂ ಸಿಡುಕಿದ. ಇನ್ನೊಂದು ಸಲ ನನ್ನ ಕೈಯ್ಯಲ್ಲಿ ಸಿಗರೇಟಿನ ಪೊಟ್ಟಣವೊಂದನ್ನು ನೋಡಿ ರೊಚ್ಚಿಗೆದ್ದ, ' ಇದು ನಿನ್ನ ಖಾಸಗಿ ಮನೆಯಲ್ಲ, ನ್ಯಾಯಾಲಯ' ಎಂದೂ ಜೋರು ಮಾಡಿದ. ನಾನು ಎಷ್ಟು ಸಾಧ್ಯವೋ ಅಷ್ಟು ವಿನಯಪೂರ್ವಕವಾಗಿ, ' ಆದರೆ ಮಹಾಸ್ವಾಮೀ ನಾನೇನು ಸಿಗರೇಟು ಸೇದುತ್ತಿಲ್ಲವಲ್ಲ ' ಎಂದೆ. ಆತ ಮಾತ್ರ, ' ತೆಪ್ಪಗಿರು ಮತ್ತು ಆ ಸಿಗರೇಟು ಪೊಟ್ಟಣವನ್ನು ಒಳಗಿರಿಸು' ಎಂದು ಗದರಿಸಿದ. ನಾನು ಅದನ್ನು ಒಳಗಿಟ್ಟುಕೊಂಡು ಮತ್ತೊಮ್ಮೆ ನ್ಯಾಯಪೀಠದತ್ತ ನೋಡಿದಾಗ, ಆತ ತನ್ನ ಮೇಜಿನ ಮೇಲಿದ್ದ ಸಿಗರೇಟು ಪೊಟ್ಟಣದಿಂದ ಸಿಗರೇಟೊಂದನ್ನು ಹೊರಗೆಳೆದು ಸೇದುತ್ತಿದ್ದುದನ್ನು ನಾನು ಪಿಂಜರದೊಳಗೆ ನಿಂತುಕೊಂಡು ನೋಡಿದೆ.
ಮುಂದಿನ ವಿಚಾರಣೆಗೆ ನಮ್ಮ ವಕೀಲರಾದ ತಸ್ಸದುಕ್ ಹುಸೈನ್ ಖಾಲಿದ್ ಹಾಜರಾಗಲಿಲ್ಲ. ನಮಗೆ ಒಂದು ವಿನಾಯಿತಿ ಸಿಕ್ಕಿತು. ಆತ ಅದರ ನಂತರದ ವಿಚಾರಣೆಗೂ ಹಾಜರಾಗಲಿಲ್ಲ, ಯಾಕೆಂದರೆ ಆತನ ಮಗ ಅದೇ ದಿನ ಇಂಗ್ಲೇಂಡಿನಿಂದ ವಾಪಾಸಾಗುತ್ತಿದ್ದುದರಿಂದ ಆತನನ್ನು ಇದಿರುಗೊಳ್ಳಲು ನಮ್ಮ ವಕೀಲರು ಹೋಗಬೇಕಾಗಿತ್ತು. ನಾವು ಮಾತ್ರ ಸಂಕಷ್ಟದಲ್ಲಿ ಬಿದ್ದೆವು. ನಾನು ಮ್ಯಾಜಿಸ್ಟ್ರೇಟನಲ್ಲಿ ನಮ್ಮ ವಕೀಲರ ಗೈರು ಹಾಜರಿಯ ಕಾರಣ ನೀಡಿ ಇನ್ನೊಂದು ದಿನಾಂಕವನ್ನು ನೀಡಲು ಪ್ರಾರ್ಥಿಸಿದೆ. ಆದರೆ ಆತ ಅದಕ್ಕೆ ನಿರಾಕರಿಸಿದ. ವಿಚಾರಣೆ ಮುಂದುವರಿಯಿತು.
ನಾನು ವಕೀಲರು ಮತ್ತು ನ್ಯಾಯಾಧೀಶರುಗಳ ಕುಟುಂಬದಿಂದಲೇ ಬಂದವನಾಗಿದ್ದುದರಿಂದ, ನನ್ನ ವಿರುದ್ಧದ ಪ್ರಕರಣವನ್ನು ನಾನೇ ಮುನ್ನಡೆಸಲು ತೀರ್ಮಾನಿಸಿದೆ. ಆ ದಿನ ಮಾನಸಿಕ ತಜ್ಞರಾಗಿದ್ದ ಡಾ. ಸಯೀದುಲ್ಲಾ ಡಿಫೆನ್ಸ್ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನಾನು ಆತನಿಗೆ ಸಾಕ್ಷಿ ಹೇಳಿಕೆ ದಾಖಲಿಸಲು ಸಹಾಯ ಮಾಡಿದೆ. ಸಾಕ್ಷಿ ವಿಚಾರಣೆ ಇನ್ನೇನು ಆರಂಭವಾಗಿರಲಿಲ್ಲ ಅಷ್ಟರಲ್ಲೇ ಮ್ಯಾಜಿಸ್ಟ್ರೇಟ್ ಮಧ್ಯೆ ಮಧ್ಯೆ ಮೂಗು ತೂರಿಸುತ್ತಾ, 'ನೀನು ಅದು ಕೇಳೋ ಹಾಗಿಲ್ಲ, ಇದು ಕೇಳೋ ಹಾಗಿಲ್ಲ' ಎಂದು ಅಡಚಣೆಯೊಡ್ಡಲು ಶುರುಹಚ್ಚಿದ್ದ. ನಾನು ಆತನನ್ನು ಅಲಕ್ಷಿಸಿ ನನ್ನ ವಿಚಾರಣೆಯನ್ನು ಮುಂದುವರಿಸಿದೆ. ಡಾ. ಸಯೀದುಲ್ಲಾರ ವಿಚಾರಣೆ ಅರ್ಧದಷ್ಟೂ ಮುಗಿದಿರಲಿಲ್ಲ, ಅಷ್ಟರಲ್ಲಿಯೇ ಅಚ್ಚುಕಟ್ಟಾಗಿ ಸಮವಸ್ತ್ರ ಧರಿಸಿದ್ದ ನಾಲ್ಕು ಜನ ಯುವ ವಕೀಲರು ನ್ಯಾಯಾಲಯದೊಳಗೆ ಪ್ರವೇಶಿಸಿದರು.
ಅವರಲ್ಲೊಬ್ಬ ಬಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದ, ' ಮಾಂಟೋ ಸಾಹೀಬ್, ನಾವು ನಿಮ್ಮ ಕೇಸನ್ನು ನಡೆಸಲೇ?', ನಾನು ಕೂಡಲೇ 'ಓಹೋ, ಖಂಡಿತವಾಗಿಯೂ' ಎಂದು ಅನುಮತಿಸಿದೆ. ಸುಂದರವಾಗಿ ಕತ್ತರಿಸಿದ ಚಿಗುರು ಮೀಸೆಯಿರುವ ಯುವ ವಕೀಲ ಮುಂದೆ ಬಂದು ನಾನು ನಿಂತಿದ್ದ ಸ್ಥಾನದಲ್ಲಿ ನಿಂತುಕೊಂಡ. ಮ್ಯಾಜಿಸ್ಟ್ರೇಟ್ ಅವನನ್ನು ನೋಡಿ, ' ಯಾರು ನೀನು? ' ಎಂದು ಕೇಳಿದ. ಯುವ ವಕೀಲ ನಗುತ್ತಾ, 'ನಾನು ಈತನ ಲಾಯರ್, ಅಲ್ವೇ ಮಾಂಟೋ ಸಾಹೀಬ್' ಎಂದ. ನಾನು 'ಹೌದೆಂದು' ತಲೆಯಲ್ಲಾಡಿಸಿದೆ. ವಿಚಾರಣೆ ಮುಂದುವರಿಯಿತು. ಮ್ಯಾಜಿಸ್ಟ್ರೇಟನಿಗೆ ಈ ಬೆಳವಣಿಗೆ ಒಂದಿಷ್ಟೂ ಇಷ್ಟವಾದಂತಿರಲಿಲ್ಲ. ಸ್ವಲ್ಪ ಸಮಯದ ನಂತರ ಆತ ಉಳಿದ ಮೂವರನ್ನು ಉದ್ದೇಶಿಸಿ, 'ನೀವು ಇಷ್ಟೂ ಜನರು ಯಾಕೆ ಒಳನುಗ್ಗಿದ್ದೀರಿ?' ಎಂದು ಕೇಳಿದ. ಅವರೆಲ್ಲರೂ, 'ಯಾಕೆಂದರೆ ನಾವೆಲ್ಲರೂ ಈ ಆರೋಪಿಯನ್ನು ಪ್ರತಿನಿಧಿಸುತ್ತಿದ್ದೇವೆ, ಅಲ್ವೇ ಮಾಂಟೋ ಸಾಹೀಬ್ ? ' ಎಂದರು. ನಾನು 'ಹೌದೆಂದು' ತಲೆಯಲ್ಲಾಡಿಸಿದೆ.
ಆ ನಾಲ್ಕೂ ಜನ ಯುವವಕೀಲರು ನಂತರ ನನಗೆ ನಿಜಸಂಗತಿಯನ್ನು ಹೇಳಿದರು. ಅವರು ಲಾಹೋರ್ ಹೈಕೋರ್ಟಿನ ವಕೀಲ ಭವನದಲ್ಲಿ ಕುಳಿತಿರುವಾಗ, ಮಾಂಟೋ ತನ್ನ ಕೇಸನ್ನು ತಾನೇ ನಡೆಸುತ್ತಿರುವ ಸುದ್ದಿಯೊಂದನ್ನು ಕೇಳಿಸಿಕೊಂಡರಂತೆ, ಆದಕಾರಣ ನನಗೆ ಸಹಾಯ ಮಾಡಲೆಂದೇ ಲಾಹೋರಿನಿಂದ ಧಾವಿಸಿ ಬಂದಿದ್ದರಂತೆ. ನಾನು ಅವರಿಗೆ ಕೃತಜ್ಞತೆ ಸಲ್ಲಿಸಿದಾಗ ಶೇಖ್ ಖುರ್ಷೀದ್ ಅಹಮ್ಮದ್ ಹೇಳಿದ, ' ಮಾಂಟೋ ಸಾಹೀಬ್, ನೀವು ನಮಗೆ ಧನ್ಯವಾದ ಹೇಳುವ ಅಗತ್ಯವಿಲ್ಲ, ಆದರೆ ನಮಗೆ ಒಂದಿಷ್ಟು ಹೊಗಳಿಕೆಯಂತೂ ಖಂಡಿತಾ ಬೇಕು, ಯಾಕೆಂದರೆ ನಾನಾಗಲೀ ಸರ್ದಾರ್ ಇಕ್ಬಾಲರಾಗಲೀ ನಿಮ್ಮ ಕಥೆಯನ್ನು ಓದಿಯೇ ಇಲ್ಲ'.
ನನ್ನ ಪರವಾಗಿ ಏಳು ಡಿಫೆನ್ಸ್ ಸಾಕ್ಷಿಗಳ ವಿಚಾರಣೆಯಾದ ನಂತರ, ನಮ್ಮ ಯುವ ವಕೀಲ ಶೇಖ್ ಖುರ್ಷೀದ್, ಉಳಿದ ಸಾಕ್ಷಿಗಳಿಗೆ ಸಮನ್ಸ್ ಹೊರಡಿಸಲು ಅನುಮತಿ ಕೋರಿದ. ಆದರೆ, ನ್ಯಾಯಾಧೀಶ ನಿರಾಕರಿಸಿದ. ಅದರ ಬದಲಿಗೆ ಸರಕಾರ ನಾಲ್ವರು ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ನನ್ನ ವಿರುದ್ಧ ಹಾಜರುಪಡಿಸಿತು. ಅವರಲ್ಲಿ ಮೌಲಾನ ತಜವ್ವುರ್ ನಜಿಯಾಬಾದಿ, ಶೋರಿಶ್ ಕಾಶ್ಮೀರಿ, ಅಬು ಸಯೀದ್ ಬಾಝ್ಮೀ, ಮತ್ತು ಮಹಮ್ಮದ್ ದೀನ್ ತಾಸೀರ್ ಇದ್ದರು. ( ಮಹಮ್ಮದ್ ದೀನ್ ತಾಸೀರ್ ಕಮ್ಯೂನಿಷ್ಟ್ ಕವಿ ಫೈಝ್ ಅಹಮ್ಮದ್ ಫೈಝ್ ಅವರ ಬಾಮೈದನಾಗಿದ್ದರು ಹಾಗೂ ಲಾಹೋರಿನ ಪ್ರಸಿದ್ಧ ಇಸ್ಲಾಮಿಯಾ ಕಾಲೇಜಿನ ಪ್ರಾಂಶುಪಾಲರಾಗಿದ್ದರು, ಮೌಲಾನಾ ತಜವ್ವುರ್ ನಜಿಯಾಬಾದಿ ಪ್ರಸಿದ್ದ ಸಂಪ್ರದಾಯವಾದಿ ವಿದ್ವಾಂಸರಾಗಿದ್ದರೆ, ಶೋರಿಶ್ ಕಾಶ್ಮೀರಿ ಪತ್ರಕರ್ತರೂ, ಅಬುಸಯೀದ್ ಬಾಝ್ಮಿ ಬಲಪಂಥೀಯ ವಿಚಾರಧಾರೆಯ ಚಿಂತಕರೂ ಆಗಿದ್ದರು. ಇವರೆಲ್ಲರೂ ಮಂಟೋನ ವಿರುದ್ಧವಾಗಿ ಸಾಕ್ಷಿ ನುಡಿಯಲು ಬಂದಿದ್ದರು.)
ವಿಚಾರಣೆಯು ಮುಗಿದ ಕಾರಣದಿಂದಾಗಿ ನ್ಯಾಯಾಲಯವು 1950 ನೇ ಜನವರಿ 16 ಕ್ಕೆ ತೀರ್ಪನ್ನು ಕಾಯ್ದಿರಿಸಿತು. ಇದಕ್ಕಿಂತ ಮೊದಲು ಕೂಡಾ ಹಲವು ಬಾರಿ ವಿಚಾರಣೆಯ ಮಧ್ಯವೇ ನ್ಯಾಯಾಧೀಶ ಮಿಯಾ ಎ.ಎಮ್ ಸಯೀದ್ ತಾನು ತೀರ್ಪು ಪ್ರಕಟಿಸುವುದಾಗಿ ಹೇಳುತ್ತಿದ್ದ. ನಮ್ಮ ವಕೀಲ ಖುರ್ಷೀದ್ ಹೆಚ್ಚೆಂದರೆ ಒಂದಿಷ್ಟು ದಂಡ ವಿಧಿಸಿ ಬಿಡಬಹುದೆಂಬ ಆತ್ಮವಿಶ್ವಾಸದಲ್ಲಿದ್ದ. ನ್ಯಾಯಾಲಯದಲ್ಲಿ ದಾಖಲಾದ ಕೊನೆಯ ಹೇಳಿಕೆ ನನ್ನದಾಗಿತ್ತು. ಅದರ ನಂತರ ನ್ಯಾಯಾಧೀಶ" ಆರೋಪಿಯನ್ನು ಅಪರಾಧಿ ಎನ್ನಲು ಈ ಹೇಳಿಕೆಯೊಂದೇ ಸಾಕು ' ಎಂದೂ ಹೇಳಿಬಿಟ್ಟಿದ್ದ.
ಜನವರಿ 16 ನೇ ತಾರೀಖಿನಿಂದ ಶೇಖ್ ಸಲೀಮ್ ಬೆಳಗ್ಗೆಯೇ ಕುಡಿಯಲು ಆರಂಭಿಸಿದ್ದ, ಅದು ಕೂಡಾ ಸ್ವಲ್ಪ ಜೋರಾಗಿಯೇ ಇತ್ತು. ಯಾಕೆಂದರೆ ಆತನಿಗೆ ಆ ದಿನ ಏನಾಗಬಹುದೋ ಎಂಬ ಬಗ್ಗೆ ಸ್ವಲ್ಪ ಸಂಶಯದ ಭಾವನೆ ಬಂದಿತ್ತಂತೆ. ನಾಸೀರ್ ಅನ್ವರ್ ಸ್ಥಿತಪ್ರಜ್ಞನಂತಿದ್ದ, ಆತನ ಶೈಲಿಯೇ ಹಾಗೇ, ಆದರೆ, ಆರೀಫ್ ಅಬ್ದುಲ್ ಮಾತೀನನ ಗಂಟಲು ಮಾತ್ರ ಒಣಗಿಹೋಗಿತ್ತು. ಆತ ನ್ಯಾಯಾಲಯಕ್ಕೆ ಹಾಜರಾದ ಮೊದಲ ದಿನದ ಸ್ಥಿತಿಯೇ ಈಗಲೂ ಇತ್ತು. ನಾನು ನ್ಯಾಯಾಲಯಕ್ಕೆ ಆಗಮಿಸಿವಾಗ ಜೇಬಿನಲ್ಲಿ ಐದುನೂರು ರೂಪಾಯಿಗಳನ್ನು ಇಟ್ಟುಕೊಂಡೇ ಬಂದಿದ್ದೆ. ಶೇಖ್ ಸಲೀಮ್ ಕೂಡ ಆಗಲೇ ಬಂದುಬಿಟ್ಟಿದ್ದ. ಸಂಪೂರ್ಣ ಮತ್ತನಾದವನಂತೆ ಕಂಡು ಬರುತ್ತಿದ್ದರೂ, ಆತನ ಜೇಬಿನಲ್ಲಿ ಇನ್ನೂ ಅರ್ಧ ಬಾಟಲಿ ವಿಸ್ಕಿ ಹಾಗೆಯೇ ಇತ್ತು. ಆತ ಅವಿಶ್ರಾಂತನಂತೆ ಕಾಣುತ್ತಿದ್ದ ಮತ್ತು ಆಗಾಗ ಹೇಳಿದ್ದನ್ನೇ ಹೇಳುತ್ತಿದ್ದ. ' ಮಂಟೋ ಸಾಹೀಬ್, ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ, ಕೊನೆಗೆ ಎಲ್ಲವೂ ಸರಿಯಾಗುತ್ತದೆ'. ನಾನು ಹಾಗೆಯೇ ನಕ್ಕು ಸುಮ್ಮನಾದೆ.
ನ್ಯಾಯಾಧೀಶ ಕೋರ್ಟಿನೊಳಗೆ ಆಗಮಿಸಿದ. ಆದರೆ ಸಧ್ಯದಲ್ಲೇ ತೀರ್ಪು ಪ್ರಕಟಿಸುವಂತಹ ಲಕ್ಷಣವೇನೂ ಆತನಲ್ಲಿ ಕಂಡು ಬರಲಿಲ್ಲ. ನಾವು ಆಗಾಗ ಹೋಗಿ ನೀರು ಕುಡಿಯುತ್ತಾ, ಯಾವಾಗ ನಮ್ಮನ್ನು ಒಳಗೆ ಕರೆಯುವರೋ ಎಂದು ಕೋರ್ಟಿನ ಹೊರಗೆಯೇ ಕುಳಿತುಕೊಂಡೆವು. ಯಾರೋ ಬಂದು ನನ್ನ ಕಿವಿಯಲ್ಲಿ ಉಸುರಿದರು, ತೀರ್ಪು ಈಗಾಗಲೇ ಸಿದ್ಧವಾಗಿರುವುದೆಂದೂ, ಆದರೆ ನ್ಯಾಯಾಧೀಶರು ಕೆಲವು ಕೊನೆಯ ಕ್ಷಣದ ಬದಲಾವಣೆಗಳನ್ನು ಮಾಡುತ್ತಿದ್ದಾರೆಂಬ ಸುದ್ದಿಯೂ ಹರಿದಾಡಿತು. ಇನ್ನೊಬ್ಬರು ಬಂದು ಇವತ್ತು ನ್ಯಾಯಾಧೀಶರು ಬೇರೆ ಯಾವ ಕೇಸನ್ನೂ ನೋಡಿಲ್ಲವೆಂದೂ ಸುಮ್ಮನೆ ತಮ್ಮ ಕೊಠಡಿಯಲ್ಲಿ ಕುಳಿತಿದ್ದಾರೆಂದೂ ಹೇಳಿದರು. ಹೀಗೆ ಎಲ್ಲಾ ತರಹದ ಕತೆಗಳೂ ಅಲ್ಲಿ ಹರಿದಾಡುತ್ತಿದ್ದವು.
ನಂತರ ಯಾರೋ ಇನ್ನೊಂದು ಸುದ್ದಿಯನ್ನು ಹೊತ್ತು ತಂದರು. ತೀರ್ಪಿನ ಒಂದು ವಾಕ್ಯವು ಹೀಗಿತ್ತಂತೆ , ' ಆರೋಪಿಯು ಈ ಕೆಳಗಿನ ಶಿಕ್ಷೆಯನ್ನು ಅನುಭವಿಸತಕ್ಕದ್ದು...' ಮತ್ತು ಆ ವಾಕ್ಯವು ನನ್ನ ಹೆಸರಿನ ಮುಂದೆಯೇ ಇತ್ತು ಎಂಬುದಾಗಿಯೂ ಅರುಹುದರು. ಅದರಲ್ಲಿ ಕೆಲವರಿಗೆ ಕೇವಲ ದಂಡ ವಿಧಿಸಿರಬಹುದೆಂದೂ ಹೇಳುತ್ತಿದ್ದರು. ನನಗೆ ಅಚ್ಚರಿಯಾಗುತ್ತಿತ್ತು. ಈ ಜೈಲು ಶಿಕ್ಷೆ ಎಷ್ಟು ಅವಧಿಯದ್ದಾಗಿರಬಹುದು? ಒಂದು ತಿಂಗಳೇ ?, ಎರಡೇ? ಅಥವಾ ಕೇವಲ ಕೆಲವು ದಿನಗಳೇ? ನಾನು ಶೇಖ್ ಖುರ್ಷೀದನಲ್ಲಿ ಕೇಳಿದಾಗ, ಆತ, ಅಂತಹ ಸಂದರ್ಭಕ್ಕೆ ಸಿದ್ಧನಾಗಿಯೇ ತಾನು ಈಗಾಗಲೇ ಜಾಮೀನು ಅರ್ಜಿಯನ್ನು ತಯಾರು ಮಾಡಿರುವುದಾಗಿಯೂ ಹೇಳಿದ. 'ಭಯ ಪಡುವ ಅಗತ್ಯವಿಲ್ಲ, ಏನಿದ್ದರೂ ಹತ್ತು - ಹನ್ನೆರಡು ದಿನಗಳಿಗಿಂತಲೂ ಹೆಚ್ಚಿರಲಿಕ್ಕಿಲ್ಲ. ಆದರೆ ಹೌದು, ಆತ ಜಾಮೀನು ಅರ್ಜಿ ಸ್ವೀಕರಿಸಲು ಮಾತ್ರ ನಿರಾಕರಿಸಬಹುದು' ಎಂದು ಹೇಳಿದ.
ನಾನು ವಕೀಲ ಶೇಖ್ ಖುರ್ಷೀದ್ ಹೇಳಿದ ವಿಷಯವನ್ನು ಮಿತ್ರ ಶೇಖ್ ಸಲೀಮನಲ್ಲಿ ಅರುಹಿದೆ, ಆತ ನಿಜವಾಗಿಯೂ ಮಂಕಾದವನಂತೆ ಕಂಡುಬಂದ, ಆದರೆ ಸ್ವಲ್ಪದರಲ್ಲಿಯೇ ಚೇತರಿಸಿಕೊಂಡು ಆತ ಹೇಳಿದ, ' ಇದಕ್ಕೆಲ್ಲಾ ಬೇಜಾರು ಮಾಡಿಕೊಳ್ಳುವ ಅವಶ್ಯಕತೆಯೇ ಇಲ್ಲ, ನಾನು ಬೇಕಿದ್ದರೆ ಟ್ಯಾಕ್ಸಿ ಮಾಡಿಕೊಂಡು ಜೈಲಿಗೂ ಬರುವೆ, ಹಣವಿದ್ದರೆ ಏನೂ ಮಾಡಬಹುದು. ನೀನು ಒಂದು ವೇಳೆ ಒಳಹೋದರೂ ಏನೂ ಸಮಸ್ಯೆಯಾಗದ ಹಾಗೆ ನಾನು ನೋಡಿಕೊಳ್ಳುವೆ, ಇಂತಹ ಸನ್ನಿವೇಶಗಳನ್ನು ಹೇಗೆ ನಿಭಾಯಿಸಬೇಕೆಂದು ನನಗೆ ಚೆನ್ನಾಗಿ ಗೊತ್ತು, ತಗೋ ಒಂದು ಲಾರ್ಜ್ ಪೆಗ್ ', ಎಂದು ಬಾಟಲಿಯನ್ನೇ ನನ್ನ ಕೈಗೆ ಕೊಟ್ಟ. ನಾನು, ' ಈಗ ಬೇಡ, ಸಂಜೆ ನೋಡೋಣ ' , ಎಂದು ಹೇಳಿದೆ. 'ನಾನು ಜೈಲಿಗೂ ತಂದು ಕೊಡುವೇ ' ಎಂದು ಶೇಖ್ ಸಲೀಮ್ ವಾಗ್ದಾನ ಮಾಡಿದಾಗ್ ನನಗೆ ನಗುವೇ ಬಂದುಬಿಟ್ಟಿತು.
ಮಧ್ಯಾಹ್ನ ಒಂದು ಗಂಟೆಗೆ ನಾವು ಬೀದಿ ಬದಿಯಿಂದ ಆಹಾರದ ಪೊಟ್ಟಣವನ್ನು ತರಿಸಿಕೊಂಡು ಸರಕಾರಿ ಕಾಲೇಜಿನ ಮುಂದಿರುವ ಹುಲ್ಲು ಹಾಸಿನಲ್ಲಿ ಕುಳಿತುಕೊಂಡು ಸೇವಿಸಿದೆವು. ಶೇಖ್ ಸಲೀಮ್ ಈಗ ಎಗ್ಗಿಲ್ಲದೆ ಕುಡಿಯುತ್ತಿದ್ದ. ಹಾಗೆಯೇ ನಾನು ಜೈಗೆ ಕಳುಹಿಸಲ್ಪಟ್ಟರೆ ಆತ ನನ್ನನ್ನು ನೋಡಿಕೊಳ್ಳಲು ಬಯಸುವ ಹಲವು ವಿನೂತನ ಯೋಜನೆಗಳನ್ನು ವಿವರಿಸುತ್ತಿದ್ದ.
ನನ್ನ ಇನ್ನೊಬ್ಬ ಮಿತ್ರ ಮುಷ್ತಾಕ್ ಅಹಮ್ಮದ್, ನನಗೆ ಜಾಮೀನು ನಿಲ್ಲಲೆಂದು ಆತನ ಓರ್ವ ಶ್ರೀಮಂತ ಮಿತ್ರನನ್ನು ಜೊತೆಗೆ ಕರೆದುಕೊಂಡು ಬಂದಿದ್ದ. ಆತನ ಹೆಸರು ಶರೀಫ್. ಎಲ್ಲರಿಗೂ ನ್ಯಾಯಾಲಯದ ಬಾಗಿಲಲ್ಲಿ ಕಾದೂ ಕಾದೂ ಸಾಕಾಗಿ ಹೋಗಿತ್ತು. ಶೇಖ್ ಸಲೀಮ್ ಯಾಕೋ ಭಾವುಕನಾಗಿದ್ದ. ಸ್ವತಃ ಅವನಂತಹ, ಶೇಖ್ ಸಲೀಮನಂತಹ ಮಿತ್ರನಿರಬೇಕಾದರೇ, ಯಾರೋ ಒಬ್ಬ ಅಪರಿಚಿತ ನನಗೆ ಜಾಮೀನು ನಿಲ್ಲಲು ಬಂದಿರುವುದು ಆತನಿಗೆ ಅವಮಾನವೆನಿಸಿತ್ತು. ಹಾಗೆಯೇ ನಾನೊಂದು ವೇಳೆ ಜೈಲಿಗೆ ಹೋದರೆ ಆ ದಿನದ ಸಂಜೆಯೂ ಹಾಳಾಗಿಹೋಗುವುದೆಂಬ ಚಿಂತೆಯೂ ಆತನನ್ನು ಕಾಡಿತ್ತು.
ಸಂಜೆ ಸುಮಾರು ಐದೂವರೆ ಗಂಟೆಗೆ ಕೋರ್ಟಿನಲ್ಲಿ ಗದ್ದಲ ಕೇಳಿಸಿತು. ನಾವು ಕೂಡಾ ವಕೀಲ ಶೇಖ್ ಖುರ್ಷೀದನ ಜೊತೆಗೆ ನ್ಯಾಯಾಲಯದೊಳಗೆ ನುಗ್ಗಿದೆವು. ನ್ಯಾಯಾಧೀಶ ಮಿಯಾ ಎ.ಎಮ್. ಸಯೀದ್ ಲೇಖನಿಯೊಂದನ್ನು ಹಲ್ಲಿನಲ್ಲಿ ಕಚ್ಚಿಕೊಂಡು ಕುಳಿತುಕೊಂಡಿದ್ದ. ಶೇಖ್ ಖುರ್ಷೀದ್ ತುಸು ಚಿಂತೆಗೊಳಗಾದವನಂತೆ ಕಂಡುಬಂದ. ನನ್ನ ಎದೆಯೂ ಢವಗುಟ್ಟತೊಡಗಿತ್ತು. ಶೇಖ್ ಸಲೀಮನ ಮುಖ ವಿವರ್ಣವಾಗಿತ್ತು, ಆರೀಫ್ ತನ್ನ ಒಣಗಿದ ತುಟಿಗಳನ್ನು ಆಗಾಗ ನಾಲಗೆಯಿಂದ ಸವರಿಕೊಳ್ಳುತ್ತಿದ್ದ, ನಾಸೀರ್ ಅನ್ವರ್ ಮಾತ್ರ ಏನೂ ಕಾಳಜಿಯೇ ಇಲ್ಲದವನಂತೆ ಕಂಡು ಬಂದ, ಆದರೆ ಆತನಿದ್ದುದೇ ಹಾಗೆ. ಅಲ್ಲಿ ಕೆಲವು ಪತ್ರಿಕಾ ವರದಿಗಾರರು ಕೂಡಾ ಹಾಜರಿದ್ದುದನ್ನು ನಾನು ಗಮನಿಸಿದೆ.
ನ್ಯಾಯಾಧೀಶ ಕಾಗದ ಹಾಳೆಗಳನ್ನು ತಿರುವತೊಡಗಿದ್ದ. ಗಂಟಲನ್ನು ಸರಿಪಡಿಸಿಕೊಂಡ, ಹಲ್ಲುಗಳಲ್ಲಿ ಕಚ್ಚುತ್ತಿದ್ದ ಲೇಖನಿಯನ್ನು ಸೀದಾ ಮಸಿ ಕುಡಿಕೆಯಲ್ಲಿ ಮುಳುಗಿಸಿದ, ಹಾಳೆಗಳ ಮೇಲೆ ಅಲ್ಲೊಂದು ಇಲ್ಲೊಂದು ಏನೇನೋ ಗೀಚತೊಡಗಿದ. ನಂತರ ಘೋಷಣೆ ಹೊರಬಿತ್ತು. ಸಾದತ್ ಹಸನ್ ಮಂಟೋನಿಗೆ ಮೂರು ತಿಂಗಳ ಕಠಿಣ ಜೈಲುವಾಸ ಮತ್ತು ಮುನ್ನೂರು ರೂಪಾಯಿಗಳ ಜುಲ್ಮಾನೆ, ಅದನ್ನು ತೆರಲು ತಪ್ಪಿದಲ್ಲಿ ಮತ್ತೆ ಇಪ್ಪತ್ತೊಂದು ದಿನಗಳ ಜೈಲುವಾಸ, ಉಳಿದ ಇಬ್ಬರು ಆರೋಪಿಗಳಿಗೆ ತಲಾ ಮುನ್ನೂರು ರೂಪಾಯಿಗಳ ಜುಲ್ಮಾನೆ ಮತ್ತು ಅದನ್ನು ಪಾವತಿಸಲು ತಪ್ಪಿದಲ್ಲಿ ಇಪ್ಪತ್ತೊಂದು ದಿನಗಳ ಸೆರೆವಾಸ.
ನಾನು ದಂಡ ಪಾವತಿಸಲೆಂದು ಮುಂದಡಿಯಿಟ್ಟೆ. ವಕೀಲ ಶೇಖ್ ಖುರ್ಷೀದ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿರುವ ಕಾರಣ ಅಲ್ಲಿಯವರೆಗೆ ಶಿಕ್ಷೆಯನ್ನು ತಡೆ ಹಿಡಿದು, ನನಗೆ ಜಾಮೀನು ನೀಡಬೇಕೆಂದು ಕೋರಿ ಜಾಮೀನು ಅರ್ಜಿಯನ್ನು ಸಲ್ಲಿಸಿದ. ನ್ಯಾಯಾಧೀಶ ಮಾತ್ರ, ' ಇದನ್ನು ಸ್ವೀಕರಿಸಿದರೆ ನನ್ನ ತೀರ್ಪಿನ ಉದ್ದೇಶವೇ ವಿಫಲವಾಗುವುದು ' ಎಂದು ಹೇಳಿಬಿಟ್ಟ. ಶೇಖ್ ಖುರ್ಷೀದ್ ವಾದಿಸತೊಡಗಿದ, ಒಂದು ವೇಳೆ ಮೇಲಿನ ನ್ಯಾಯಾಲಯದಲ್ಲಿ ಮಂಟೋ ನಿರ್ದೋಷಿಯೆಂದು ಸಾಬೀತಾದರೆ, ಆಗ ಆತ ಜೈಲಿನಲ್ಲಿ ಕಳೆದಿರುವ ಶಿಕ್ಷೆಗೆ ಅದಾವ ಪರಿಹಾರ ನೀಡಲು ಸಾಧ್ಯ ? ಎಂದೂ ಕೇಳಿದ. ಕೊನೆಗೆ ನ್ಯಾಯಾಧೀಶ ಪರಮ ಅಸಹನೆಯಿಂದ ಸಿಡುಕುತ್ತಾ ನನಗೆ ಜಾಮೀನು ನೀಡಲು ಒಪ್ಪಿಗೆ ನೀಡಿದ.
ನಾಸೀರ್ ಅನ್ವರನ ಕೈಯ್ಯಲ್ಲಿ ಕಾಸಿಲ್ಲದ ಕಾರಣ ಅವನ ಜುಲ್ಮಾನೆಯನ್ನು ಪಾವತಿಸುವ ಬಗ್ಗೆ ಸ್ವಲ್ಪ ಚಿಂತೆಯಾಯಿತು. ಆ ಸಮಯದಲ್ಲಾಗಲೇ ಭಯಾನಕವಾಗಿ ಪಾನಮತ್ತನಾಗಿದ್ದ ನನ್ನ ಮಿತ್ರ ಶೇಖ್ ಸಲೀಮ್, ತೂರಾಡುತ್ತಲೇ ಮುಂದೆ ಬಂದು, ' ಇವನಿಗೆ ನಾನು ಜಾಮೀನಿ ನಿಲ್ಲುವೆ !' ಎಂದ. ಈಗ ಮಾತ್ರ ನಾನು ಸಂಪೂರ್ಣವಾಗಿ ಧರೆಗಿಳಿದುಹೋದೆ. ಒಂದು ವೇಳೆ ಈತನ ಪಾನ ಸೇವನೆಯ ವಿಷಯ ಈ ನ್ಯಾಯಾಧೀಶನ ಗಮನಕ್ಕೇನಾದರೂ ಬಂದು ಬಿಟ್ಟರೆ ಆತ ಖಂಡಿತವಾಗಿಯೂ ಶೇಖ ಸಲೀಮನನ್ನು ಸೀದಾ ಜೈಲಿಗೆ ತಳ್ಳಿ ಬಿಡುತ್ತಿದ್ದ.
ನಂತರ ಇವನಿಗೆ ಜಾಮೀನು ನಿಲ್ಲುವವರು ಯಾರು? ಅಂತಹ ದುರಂತವೊಂದು ನನ್ನ ಕಣ್ಣಮುಂದೆಯೇ ಘಟಿಸಲಿರುವುದನ್ನು ನೋಡಲು ಶಕ್ತಿ ಸಾಲದೆ ನಾನು ನ್ಯಾಯಾಲಯದಿಂದ ಹೊರಗೆ ಬಂದುಬಿಟ್ಟೆ. ಸ್ವಲ್ಪ ಹೊತ್ತಿನ ನಂತರ ಮಿತ್ರ ಶೇಖ್ ಸಲೀಮ್ ಗೋಚರಿಸಿದ. ಇನ್ನೂ ತೂರಾಡುತ್ತಲೇ ಇದ್ದ. ಸೀದಾ ನನ್ನ ಮೇಲೆಯೇ ಬೀಳುವಂತೆ ಬಳಿಗೆ ಬಂದವನೇ ಎರಡೂ ಕೈಗಳನ್ನು ನನ್ನ ಹೆಗಲ ಮೇಲೆ ಹಾಕಿ ನನ್ನನ್ನು ಅಪ್ಪಿಕೊಂಡು ಅತ್ತೇ ಬಿಟ್ತ. ' ನನ್ನ ಸಹೋದರನನ್ನು ಆ ದೇವರೇ ಕಾಪಾಡಿದ ' ಎಂದು ಬಿಕ್ಕಿದ. ನಂತರ ತನ್ನ ಒಳ ಜೇಬಿನಿಂದ ವಿಸ್ಕಿಯ ಬಾಟಲಿಯನ್ನು ಹೊರ ತೆಗೆದುಕೊಂಡು ಅದರಲ್ಲಿದ್ದ ಕೊನೆಯ ಗುಟುಕನ್ನು ಗಂಟಲಿಗೇರಿಸಿಕೊಂಡು ಘೋಷಿಸಿದ, ' ಮಿತ್ರರೇ, ಗಡಂಗಿನ ಬಾಗಿಲುಗಳು ಮುಚ್ಚಿಕೊಳ್ಳುವ ಮುನ್ನ ನಡೆಯಿರಿ ಈ ದರಿದ್ರ ಸ್ಥಳದಿಂದ ಹೊರಟು ಬಿಡೋಣ !'.
1950 ನೇ ಇಸವಿ, ಜನವರಿ ತಿಂಗಳ 28ರಂದು ನಾನು ತೀರ್ಪಿನ ವಿರುದ್ಧದ ಮೇಲ್ಮವಿಯನ್ನು ಲಾಹೋರಿನ ಸೆಷನ್ಸ್ ನ್ಯಾಯಾಧೀಶ ಮೆಹರುಲ್ ಹಕ್ ಅವರ ನ್ಯಾಯಾಲಯಕ್ಕೆ ಸಲ್ಲಿಸಿದೆ. ಆದರೆ ಆತ ನನ್ನ ಕುಟುಂಬದ ಕೆಲವು ಸದಸ್ಯರ ಪರಿಚಯಸ್ಥನೆಂಬ ಕಾರಣ ನೀಡಿ ಮೇಲ್ಮನವಿಯನ್ನು ಅಪರ ಸೆಷನ್ಸ್ ನ್ಯಾಯಾಧಿಶ ಪಿ.ಎಸ್ ಜೋಷುವಾರವರಿಗೆ ವರ್ಗಾಯಿಸಿದ. ಆದರೆ ಜೋಷುವಾ ತನಗೆ ಉರ್ದು ಭಾಷೆ ಸರಿಯಾಗಿ ಬರುವುದಿಲ್ಲ ಎಂಬ ಕಾರಣ ನೀಡಿ ಕಡತವನ್ನು ವಾಪಾಸು ಮಾಡಿದರು. ಕೊನೆಗೆ ಪ್ರಕರಣ ಇನ್ನೋರ್ವ ಅಪರ ಸೆಷನ್ಸ್ ನ್ಯಾಯಾಧೀಶರಾಗಿದ್ದಂತಹ ಇನಾಯತುಲ್ಲಾ ಖಾನ್ ಅವರ ನ್ಯಾಯಾಲಯಕ್ಕೆ ಬಂದಿತು. ನಾವೆಲ್ಲರೂ ಅವರ ಮುಂದೆ ಹಾಜರಾದೆವು. ಆತ ನಮ್ಮ ವಕೀಲರಿಗೆ ಮೊತ್ತ ಮೊದಲು ಹೇಳಿದ ವಿಷಯವೇನೆಂದರೇ, ಆತನಿಗೆ ಇಂತಹ ಪ್ರಕರಣವೇ ತೀರಾ ಹೊಸದಾಗಿರುವ ಕಾರಣ ಅದನ್ನು ಕೂಲಂಕಷವಾಗಿ ಅಧ್ಯಯನ ಮಾಡಲು ಸಾಕಷ್ಟು ಕಾಲಾವಕಾಶ ಬೇಕಾಗಬಹುದೆಂದು. ಹಾಗಾಗಿ ವಿಚಾರಣೆಯು ಒಂದು ತಿಂಗಳವರೆಗೆ ಮುಂದೂಡಲ್ಪಟ್ಟಿತು.
ನಮ್ಮ ವಕೀಲ ಶೇಖ್ ಖುರ್ಷೀದನಿಗೆ ಕೂಡಾ ಸಂತೋಷವಾಯಿತು
ಆತನಿಗೂ ಪ್ರಕರಣವನ್ನು ಅಧ್ಯಯನ ಮಾಡಲು ಸಾಕಷ್ಟು ಕಾಲಾವಕಾಶ ಒದಗಿತ್ತು. ಕೊನೆಗೂ ಜುಲೈ 10 ರಂದು ನಮ್ಮ ಪ್ರಕರಣ ಮತ್ತೆ ವಿಚಾರಣೆಗೆ ಬಂತು. ಆದರೆ ಶೇಖ್ ಖುರ್ಶೀದನಿಗೆ ನ್ಯಾಯಾಧೀಶರ ಬಗ್ಗೆ ಒಳ್ಳೆಯ ಭಾವನೆ ಇರಲಿಲ್ಲ. ' ಆತ ಸರಿಯಿಲ್ಲ, ಸ್ವಲ್ಪ ಸಂಕುಚಿತ ಮನೋಭಾವದವನು, ಇಷ್ಟುದ್ದ ಗಡ್ಡವೂ ಇದೆ !, ಉಪವಾಸ ಅದೂ ಇದೂ ಸಂಪ್ರದಾಯಗಳ ಅಭ್ಯಾಸವೂ ಅವನಿಗಿದೆ ', ಎಂದು ನಮ್ಮ ವಕೀಲ ದೂರಿದ. ನಾವು ಸೋತರೆ ಮುಂದೆ ಹೈಕೋರ್ಟಿನ ಮೊರೆ ಹೋಗೋಣ ಎಂದು ನಾನು ಆತನಿಗೆ ಸಮಾಧಾನ ಮಾಡಿದೆ. ವಿಚಾರಣೆಯ ದಿನ ಬಂತು. ನಾನು ಉದ್ವೇಗಕ್ಕೊಳಗಾಗಿದ್ದೆ. ಮನೆಯಲ್ಲಿ ಎಲ್ಲರೂ ನಾನು ನಿರಪರಾಧಿಯೆಂದು ಸಾಬೀತಾಗಲೆಂದು ಪ್ರಾರ್ಥಿಸುತ್ತಿದ್ದರು.
ನ್ಯಾಯಾಧೀಶರು ನಾಲ್ಕು ತಾಸುಗಳವರೆಗೆ ವಾದ-ವಿವಾದಗಳನ್ನು ಆಲಿಸಿದರು. ಈತನೂ ಕೂಡಾ ಮ್ಯಾಜಿಸ್ಟ್ರೇಟ್ ಎ.ಎಮ್ ಸಯೀದನಂತೆ ನನ್ನ ವಿರುದ್ಧವೇ ನಿಲ್ಲಬಹುದು ಎಂದು ನಾನು ಭಯಪಟ್ಟೆ. ಮರುದಿನ ಬೆಳಿಗ್ಗೆಯೇ ನಾವು ನ್ಯಾಯಾಲಯಕ್ಕೆ ಹಾಜರಾದಾಗ ಆತ ನಮ್ಮ ವಕೀಲರಿಗೆ ಮೊದಲೇ ಹೇಳಿದರು, ' ಕ್ಷಮಿಸಿ, ನೀವು ಇನ್ನೂ ಅರ್ಧಗಂಟೆ ಕಾಯಬೇಕಾಗಬಹುದು, ನನಗೆ ಕೆಲವು ಸಣ್ಣ ಪುಟ್ಟ ಕೆಲಸಗಳನ್ನು ನಿರ್ವಹಿಸಬೇಕಾಗಿದೆ'.
ನಾವು ನ್ಯಾಯಾಂಗಣದಿಂದ ಹೊರಬಂದೆವು. ಆರೀಫ್ ಮಾತಿನ್ ಮೌನವಾಗಿದ್ದ. ವಕೀಲ ಶೇಖ್ ಖುರ್ಷೀದ್ ದೊಡ್ಡ ದೊಡ್ಡ ಕಾನೂನು ಪುಸ್ತಕಗಳನ್ನು ಹೊತ್ತುಕೊಂಡು ಬಂದಿದ್ದ. ಆಗಾಗ ಅವುಗಳಲ್ಲಿ ಗುರುತು ಹಾಕಿಕೊಂಡಿದ್ದ ಉಲ್ಲೇಖಗಳನ್ನು ಓದುತ್ತಿದ್ದ. ನಾಸೀರ್ ಅನ್ವರ್ ಕರವಸ್ತ್ರವನ್ನು ಹುಲ್ಲು ಹಾಸಿನ ಮೇಲೆ ಹಾಸಿಕೊಂಡು ಕುಳಿತು ಅವನಷ್ಟಕ್ಕೇ ಯಾವುದೋ ಹಾಡನ್ನು ಗುನುಗುನಿಸುತ್ತಿದ್ದ. ಬಹುಷಃ ಕಾಶ್ಮೀರೀ ಹಾಡಿರಬೇಕು.
ಸುಮಾರು ಮುಕ್ಕಾಲು ಗಂಟೆಯ ನಂತರ ನಮ್ಮನ್ನು ಒಳಕ್ಕೆ ಕರೆಯಲಾಯಿತು. ನಾವು ಒಳ ಪ್ರವೇಶಿಸಿ ಶಿರಬಾಗಿಸಿ ನ್ಯಾಯಾಧೀಶರಿಗೆ ವಂದಿಸಿದೆವು. ಆತ ತನ್ನತಲೆಯನ್ನು ತುಸು ಬದಿಗೆ ಸರಿಸಿದಂತೆ ಮಾಡಿ ನಮ್ಮ ಗೌರವವನ್ನು ಸ್ವೀಕರಿಸಿದ ಸೂಚನೆ ನೀಡಿದರು. ನಾವು ಮೇಲ್ಮನವಿದಾರರಿಗೆ ನಿಲ್ಲಲು ನಿಗದಿಗೊಳಿಸಿದ್ದ ಸ್ಥಳದಲ್ಲಿ ನಿಂತುಕೊಂಡೆವು. ಸಣ್ಣ ಸ್ವರದಲ್ಲಿ , ' ಕುಳಿತುಕೊಳ್ಳಿ ' ಎಂದು ನ್ಯಾಯಾಧೀಶರು ಹೇಳಿದ್ದನ್ನು ಕೇಳಿ ನಾನು ಅತ್ತಿತ್ತ ನೋಡಿದೆ. ಕೊನೆಗೆ ಅದು ನಮಗೇ ಹೇಳಿದ್ದು ತಿಳಿದಾಗ ನನಗೆ ಅಚ್ಚರಿಯಾಯಿತು. ನಾವೆಲ್ಲರೂ ಕುಳಿತುಕೊಂಡೆವು.
ಮತ್ತೊಮ್ಮೆ ವಾದ ವಿವಾದಗಳು ಆರಂಭಗೊಳ್ಳುವುದಕ್ಕೆ ಮುಂಚೆಯೇ ನ್ಯಾಯಾಧೀಶರು, ' ನಾನು ಪ್ರಕರಣವನ್ನು ತುಂಬಾ ಕೂಲಂಕಷವಾಗಿ ಅಧ್ಯಯನ ಮಾಡಿರುವೆ, ಮುಂದೆ ಏನಾಗುತ್ತೋ ನೋಡೋಣ. ಕೆಳಗಿನ ನ್ಯಾಯಾಲಯದ ಅಭಿಪ್ರಾಯವನ್ನೂ , ಸಾಕ್ಷ್ಯಗಳನ್ನೂ ನೋಡಿರುವೆ, ಹಾಗೆಯೇ ಆ 'ಥಂಡಾ ಗೋಶ್ತ್' ಕಥೆಯನ್ನೂ ಗಮನವಿಟ್ಟು ಓದಿರುವೆ 'ಎಂದರು
ನಂತರ ಸುಮಾರು ಅರೆತಾಸಿನವರೆಗೆ ಕೆಲವು ಸೂಕ್ಷ್ಮ ಕಾನೂನಿನ ಔಪಚಾರಿಕತೆಗಳು ಮುಂದುವರೆದವು. ವಾದ- ವಿವಾದಗಳು ಆರಂಭಗೊಂಡವು. ನ್ಯಾಯಾಧೀಶರು ನಗುತ್ತಾ ಹೇಳಿದರು , ' ನಾನು ಒಂದು ವೇಳೆ ಈ ಸಾದತ್ ಹಸನ್ ಮಂಟೋನಿಗೆ ಏನಾದರೂ ಶಿಕ್ಷೆ ಕೊಟ್ಟರೆ, ಆತ ಒಬ್ಬ ಗಡ್ಡದ ಮನುಷ್ಯ ನನ್ನನ್ನು ಶಿಕ್ಷಿಸಿದ ಎಂದು ಎಲ್ಲಾ ಕಡೆ ಬರೆದುಕೊಂಡು ತಿರುಗಬಹುದು ' . ನಂತರ ಕೆಳನ್ಯಾಯಾಲಯದ ತೀರ್ಪಿನ ಬಗ್ಗೆ ಸ್ವಲ್ಪ ಮಾತನಾಡಿದರು. ನಂತರ ತಕ್ಷಣ ಅದನ್ನು ನಿಲ್ಲಿಸಿ, ನಾವೇನಾದರೂ ಕೆಳನ್ಯಾಯಾಲಯದಲ್ಲಿ ಜುಲ್ಮಾನೆಯನ್ನು ಪಾವತಿಸಿದ್ದೇವೆಯೇ ಎಂದು ಕೇಳಿದರು. ನಾವು ಹೌದು ಎಂದು ಹೇಳಿದಾಗ, ಆತ ತೀರ್ಪು ಘೋಷಿಸಿಯೇ ಬಿಟ್ಟರು. " ನಿಮ್ಮನ್ನು ದೋಷಮುಕ್ತಗೊಳಿಸಲಾಗಿದೆ, ನೀವು ಕಟ್ಟಿದ ದಂಡದ ಹಣವನ್ನು ಮರುಪಾವತಿಸಲಾಗುವುದು !"
-- ಪುನೀತ್ ಅಪ್ಪು.
Post script : ಆದರೆ ಸರಕಾರ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಅದು ಲಾಹೋರ್ ಹೈಕೋರ್ಟಿನಲ್ಲಿ ಮಂಟೊನ ಪರವಾಗಿ ಬಂದಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತು. ಅದಾಗಲೇ ಕಮ್ಯೂನಿಷ್ಟರಿಂದ ಮತ್ತು ಪ್ರಗತಿ ಪರ ಸಂಘದಿಂದಲೂ ಬಹಿಷ್ಕಾರಕ್ಕೊಳಗಾಗಿದ್ದ ಮಂಟೋ ಈ ಸಮಯದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ. ಆದುದರಿಂದಲೇ ಮಂಟೋ ತನ್ನ ಕಥೆಗಳಿಂದಾಗಿ ಅನುಭವಿಸಿದ ಮೊಕದ್ದಮೆಗಳ ವೃತ್ತಾಂತವನ್ನು 'ಝೆಹಮತೇ ಮೆಹರೇ ದರ್ಖಶಣ್' ಎಂಬ ಗಾಲಿಬನ ಶಾಯರಿಯ ಹೆಸರಿನಿಂದ ಕರೆದಿದ್ದಾನೆ.
ಲಾಹೋರ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಮೊಹಮ್ಮದ್ ಮುನೀರ್ , ಸಾದತ್ ಹಸನ್ ಮಂಟೋನನ್ನು ದೋಷಿಯೆಂದು ತೀರ್ಪಿತ್ತು, ಆತನ ಕಥೆ 'ಥಂಡಾ ಗೋಶ್ತ್' ಅನ್ನು ನಿಷೇದಿಸಿದರು. ಆದರೆ ಇತಿಹಾಸದ ತೀರ್ಪು ಬೇರೆಯದೇ ಇತ್ತು. ಅಂದು ಮಂಟೋ ಏಕಾಂಗಿಯಾಗಿ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾಗ ಆತನ ಸಹಾಯಕ್ಕೆ ಧಾವಿಸಿದ್ದ ನಾಲ್ಕು ಮಂದಿ ತುಂಟ ವಕೀಲರು ಮುಂದೊಂದು ದಿನ ಪಾಕಿಸ್ತಾನ ದೇಶದ ಉನ್ನತ ಪದವಿಗೇರಿದರು. ಶೇಖ್ ಖುರ್ಷೀದ್ ಪಾಕಿಸ್ತಾನದ ಕಾನೂನು ಮಂತ್ರಿಯಾದರು, ಜೊತೆಗಿದ್ದ ಇತರರಲ್ಲಿ ಮಝರುಲ್ ಹಕ್ ಲಾಹೋರ್ ಹೈಕೋರ್ಟಿನ ನ್ಯಾಯಮೂರ್ತಿಯಾದರು, ಸರ್ದಾರ್ ಇಕ್ಬಾಲ್ ಲಾಹೋರ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾದರು.
ಮಂಟೋ ಬರೆದ 'ಥಂಡಾ ಗೋಶ್ತ್' ಕಥೆ ಪಾಕಿಸ್ತಾನದಲ್ಲಿ ಮತ್ತೆ ಮತ್ತೆ ಪ್ರಕಾಶನಗೊಳ್ಳುತ್ತಲೇ ಇದೆ. ಸಿನಿಮಾವಾಗಿ, ನಾಟಕವಾಗಿ, ಟೆಲಿಚಿತ್ರವಾಗಿ ಮತ್ತೆ ಮತ್ತೆ ನೈತಿಕ ಮುಖವಾಡವನ್ನು ಹೊತ್ತು ಮೆರೆಯುವ ಸಮಾಜಕ್ಕೆ ಸವಾಲೊಡ್ಡುತ್ತಲೇ ಇದೆ. ಅಂದು ಮಂಟೋನ ಕಥೆಯನ್ನು ನಿಷೇದಿಸಿದ್ದ ಲಾಹೋರ್ ಹೈಕೋರ್ಟಿನ ತೀರ್ಪು ಈಗ ಇತಿಹಾಸದ ಕಸದ ಬುಟ್ಟಿ ಸೇರಿಹೋಗಿದೆ. ಜಗತ್ತಿನ ಮಹಾನ್ ಸಣ್ಣ ಕಥೆಗಳ ಸರದಾರ ಮಂಟೋ ಮಾತ್ರ ಅಮರವಾಗಿದ್ದಾನೆ.
-- ಪುನೀತ್ ಅಪ್ಪು.


Comments
Post a Comment