ಕವಿತೆಗೊಂದು ಚಿತ್ರ ಬೇಕೆ ?

ಕವಿಯೆ ನಿನ್ನ ಕವಿತೆಗೊಂದು 
ರಂಗು ರಂಗಿನ  ಚಿತ್ರವೇಕೆ
ಬರಹಕ್ಕೊಂದು ಹೂವ ಬಳ್ಳಿ 
ಅದರ ಮೇಲೆ ಚಿಟ್ಟೆ ಬೇಕೆ ?

ಮರಳುಗಾಡಿನಲ್ಲಿ ನೀನು 
ತೊಟ್ಟು ಹನಿಗೆ ಅಲೆದರೂನು
ನಿನ್ನ ಲೇಖನಿ ಯಲ್ಲಿ ನೀನು 
ಸಮುದ್ರವನ್ನೇ ಮಥಿಸಬಾರದೇಕೆ ?

ನಿನ್ನ ಕಣ್ಣಿನಲ್ಲಿ ಪೊರೆಯು ಬಂದು 
ಮಂಜು ಕವಳ ಕವಿದರೇನು
ಕವಿತೆಯಲ್ಲಿ ಸಗ್ಗ  ಇಳಿಸಿ ನೀನು 
ಇಳೆಯ ಜನರ ರಮಿಸಬಾರದೇಕೆ ?

ರಾಜ್ಯವೆಲ್ಲಾ ಕೊಳ್ಳೆಹೋಗಿ
 ಲೋಕವೆಲ್ಲಾ ಕತ್ತಲಾಗಿ 
ಬೆಳಕು ಬಂಧಿಯಾದರೂನು
ಎದೆಯ ಗುಡಿಗೆ ಕಿಚ್ಚು ಹಚ್ಚಿ 
ಆತ್ಮವನ್ನೆ ಸುಟ್ಟು ನೀನು 
ಜಗದ ಇರುಳ ಕಳೆಯ ಬಾರದೇಕೆ ?

ಮನುಜರೆದೆಗೆ ಬರವು ಬಡಿದು 
ಅಂತಃಕರಣ ಸೆಲೆಯು ಬತ್ತಿ 
ಧರೆಯೇ ಹೊತ್ತಿ ಉರಿದರೂನು
ಉರಿವ ಹೃದಯ ಜ್ವಾಲೆಗಳಿಗೆ
ನಿಟ್ಟುಸಿರಿನ ಗಾಳಿ ಬೀಸಿ
ಆಶ್ರು ಜಲದ ಮಳೆಯ ಸುರಿಸಿ
ಮಳೆ ಬಿಲ್ಲನು ರಚಿಸಬಾರದೇಕೆ ?

ಬೇಲಿಯೆಲ್ಲಾ ಶೂಲವಾಗಿ 
ದೇಶವೆಲ್ಲಾ ಜೈಲೆ ಆಗಿ
ನೀನೆ ನಿನ್ನ ಮನೆಯ ಒಳಗೆ  
ಬಂಧಿಯಾಗಿ ಹೋದರೇನು
ಕವಿತೆಯೆಂಬ ಹಕ್ಕಿಗೊಂದು 
ಒಲವ ರೆಕ್ಕೆ ಪುಕ್ಕ ಬಿಡಿಸಿ
ಸ್ವತಂತ್ರ ಕನಸಿನಾಗಸಕ್ಕೆ 
ಒಮ್ಮೆ ಹಾರಿ ಬಿಡ ಬಾರದೇಕೆ ?

-- ಪುನೀತ್ ಅಪ್ಪು

Comments