"ಸತ್ಯವನ್ನು ಕಿನಾರೆಯ ಮರಳ ಮೇಲೆ ಮತ್ತೆ ಮತ್ತೆ ಬರೆಯುತ್ತಲೇ ಇರಬೇಕು"

ಗಝಲ್

ಹೂವಿನ ಹಾಸುಗೆಯಲ್ಲಿ ಹೊರಳಾಡಿ
ಸುಳ್ಳನ್ನು  ನಂಬಿಸಬಹುದು 
ಸತ್ಯದ ಸಾಕ್ಷಾತ್ಕಾರಕ್ಕೆ ಬಿರುಬೇಸಿಗೆಯ 
ಮರುಭೂಮಿಯಲ್ಲಿ ನಡೆದಾಡಬೇಕು.

ರಂಗು ರಂಗಿನ ವೈಯ್ಯಾರದಲ್ಲಿ
ಸುಳ್ಳು ರಾಸಲೀಲೆಯಾಡಬಹುದು
ಸತ್ಯವೊಂದು ಬರಿಬೆತ್ತಲೆಯಾಗಿ 
ಸಂತೆಯಲ್ಲಿ ನಿಲ್ಲಲೇ ಬೇಕು 

ಸುಳ್ಳಿನ ಅಲೆಗಳ ಅಬ್ಬರಕ್ಕೆ ಕೊಚ್ಚಿ
ಹೋದವೆಷ್ಟೋ ನಗರಗಳು
ಸತ್ಯವನ್ನು  ಕಿನಾರೆಯ ಮರಳ ಮೇಲೆ
ಮತ್ತೆ ಮತ್ತೆ ಬರೆಯುತ್ತಲೇ ಇರಬೇಕು

ಕಗ್ಗತ್ತಲಿನಲ್ಲಿ ಅಲೆದಾಡುವ ಕಂಗಳಿಗೆ
ಸತ್ಯದ ಕಾಡಿಗೆಯನ್ನು ಬಳಿಯಲಾಗದು
ಕಣ್ಣುಕುಕ್ಕುವ ಬೆಳಕಿನಲ್ಲಿಯೂ ಸತ್ಯದ ದೀವಿಗೆಯೊಂದು ಕೈಯ್ಯಲ್ಲಿರಲೇ ಬೇಕು

ಸುಳ್ಳಿನ ಕಾರವಾನವು ಅದೆಷ್ಟೇ
ವೈಭವಯುತವಾಗಿರಲಿ 'ಅಪ್ಪು'
ಶವಪೆಟ್ಟಿಗೆಯೊಳಗೂ ಸತ್ಯವೊಂದು
ಪ್ರತಿಭಟಿಸುತ್ತಲೇ ಇರಬೇಕು !

-- ಪುನೀತ್ ಅಪ್ಪು
#ಕನ್ನಡ_ಗಝಲ್

Caligraphy art by  ಮುಫೀದ ಅಹಮ್ಮದ್ 

Comments

  1. ಸತ್ಯವನ್ನು ಕಿನಾರೆಯ ಮರಳಮೇಲೆ ಮತ್ತೆ ಮತ್ತೆ ಬರೆಯುತ್ತಲೇ ಇರಬೇಕು...💙

    ReplyDelete

Post a Comment