ಬೀದಿ ಬದಿಯ ದೇವರು

ಬೀದಿ ಬದಿಯ ದೇವರು

ಸತತ ಎರಡು ತಿಂಗಳಿನಿಂದ ಮನೆಯಲ್ಲಿ ಕುಳಿತು ಬೇಸರವಾಗಿ ಅಂದು ಹೊರಗೆ ಬಿದ್ದಿದ್ದೆ. ಬೀದಿಗಳೆಲ್ಲವೂ ಖಾಲಿ ಬಿದ್ದಿದ್ದವು. 

ಊರ ಹೊರಗೆ ಒಂದು ಪಾಳು ಬಿದ್ದಿದ್ದ ಪುರಾತನ ಕಟ್ಟಡದ ಅವಶೇಷವಿತ್ತು.  ದೇವಾಲಯವೋ ಬಸದಿಯೋ ದರ್ಗಾವೋ ತಿಳಿಯದು. ಅದಕ್ಕೆ ಯಾವುದಾದರೂ ಧರ್ಮದ ಹೆಸರು ನೀಡಲಾರದಷ್ಟು ಅದು ಜೀರ್ಣವಾಗಿಹೋಗಿತ್ತು. 

ನನಗೆ ಮಾತ್ರ ಸಂಜೆಯ ನೀರವತೆಯಲ್ಲಿ ಹೊತ್ತು ಕಳೆಯಲು ನೆಚ್ಚಿನ ತಾಣ.  ರಾಶಿಬಿದ್ದಿದ್ದ ಕಲ್ಲುಗಳನ್ನು ನಾಜೂಕಾಗಿ ಹತ್ತಿಳಿದು, ಮುಳ್ಳುಪೊದೆಗಳಿಂದ ಮುತ್ತಿಕ್ಕಿಕೊಳ್ಳದಂತೆ ಸರಿದು ಬಂದಾಗ, ಪ್ರಾಂಗಣದಂತಿರುವ ಒಂದು ಚೌಕ ಮತ್ತು ಕಂಬಗಳ ಬದಿಯಲ್ಲಿ ಒಬ್ಬ ಮುದುಕ ಕುಳಿತ್ತಿದ್ದ.

ಅಲ್ಲಲ್ಲಿ ಹರಿದುಹೋದ ಹಳೇಯ ಜೀನ್ಸ್ ಪ್ಯಾಂಟು, ಅದಕ್ಕೆ ಮ್ಯಾಚ್ ಆಗುವಂತಹ ಅದೇ ಸ್ಥಿತಿಯಲ್ಲಿರುವ ಷರಟು, ಕೆದರಿದ ಗಡ್ಡ ಮೀಸೆಗಳು, ಚದುರಿಹೋಗಿರುವ ತಲೆಕೂದಲುಗಳು ಮೈಯ್ಯೆಲ್ಲಾ ಬಿಳಿಕೂದಲಿನಿಂದ ತುಂಬಿಹೋಗಿರುವ ಆ ಮುದುಕ ಒಂದು ಕಾಲನ್ನು ಕೆಳಕ್ಕೆ ಇಳಿ ಬಿಟ್ಟು ಇನ್ನೊಂದು ಕಾಲನ್ನು ಕುಕ್ಕರುಗಾಲಿನಲ್ಲಿ ಕುಳಿತವನಂತೆ ಕುಳಿತು ಏನನ್ನೋ ತಿನ್ನುತ್ತಿದ್ದ. 

ನಾನು ಇನ್ನಷ್ಟು ಹತ್ತಿರ ಹೋಗಿ ನೋಡಿದೆ. ಆತನ ಮೈಯ್ಯಲ್ಲಿ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದವು. ರಕ್ತವಿನ್ನೂ ಒಣಗಿರಲಿಲ್ಲ. ಬೆನ್ನಿನ ಭಾಗದಲ್ಲಿ ಷರಟು ಹರಿದು ಹೋಗಿ ಅಲ್ಲಿ ಬಾಸುಂಡೆಗಳ ಗುರುತು ಎದ್ದು ಕಾಣುತ್ತಿದ್ದವು. ಬಾಗಿದ ಬೆನ್ನಿನ ನಡುವೆ ಒಂದೊಮ್ಮೆ ಆತನನ್ನು ಸ್ವಾಭಿಮಾನದ ಮನುಷ್ಯನ ಹಾಗೆ ಎದೆಯೆತ್ತಿ ನಡೆಸಿದ ಕುರುಹುಗಳ ಹಾಗೆ ಬೆನ್ನಿಹುರಿ ಮೂಳೆಗಳು ವಕ್ರವಾಗಿ  ಎದ್ದು ಕಾಣಿಸುತ್ತಿದ್ದವು. ಆತ ಕಾಗದದ ತುಣುಕೊಂದರಲ್ಲಿ ಏನನ್ನೋ ಹಾಕಿಕೊಂಡು ನಿಧಾನವಾಗಿ ಚಪ್ಪರಿಸಿಕೊಂಡು ತಿನ್ನುತ್ತಿದ್ದ.  ಬಹುಷಃ ಲಾಕ್ಡೌನ್ ಸಮಯದಲ್ಲಿ ಮೈಯ್ಯಲ್ಲಿ ಪ್ರಜ್ಞೆಯಿಲ್ಲದ ತಿರುಗಾಡುತ್ತಿದ್ದ ಭಾರತದನಗರಗಳ ಯಾವುದೋ ಹುಚ್ಚನಿರಬೇಕೆಂದು ಅನಿಸಿತು. ಬಹುಷಃ ಈತನಿಗೆ ಸಿಕ್ಕಿದಲ್ಲೆಲ್ಲಾ ಪೋಲಿಸರು ಲಾಠಿಯಿಂದ ಹೊಡೆದು ಓಡಿಸಿರಬಹುದು. 

ಆತನನ್ನು ಅವನಷ್ಟಕ್ಕೆ ಬಿಟ್ಟು ಹೋಗೋಣವೆಂದುಕೊಂಡವನಿಗೆ ಏನೋ ಸಂಶಯಬಂದು ಆತ ಏನು ತಿನ್ನುತ್ತಿದ್ದಾನೆ ಎಂಬ ಕುತೂಹಲದಲ್ಲಿ ಇನ್ನೂ ಸ್ವಲ್ಪ ಹತ್ತಿರಹೋಗಿ ನೋಡಿದೆ. ಆತ ಹಿಡಿ ಮಣ್ಣುಗಳನ್ನು ತಂದು ನೀರು ಹಾಕಿ ಒದ್ದೆ ಮಾಡಿ ತಿನ್ನುತ್ತಿದ್ದ. ಆತನನ್ನು ಮಾತನಾಡಿಸಲೇ ಅಥವಾ ಅಲ್ಲೇ ಬಿಟ್ಟು ಹಿಂತಿರುಗಲೇ ಎಂದು ನಾನು ಯೋಚಿಸುತ್ತಿರುವಾಗಲೇ ಆತ ನನ್ನತ್ತ ತಿರುಗಿ ನೋಡಿದ್ದ. 

ನಾನು ಆತನ ಮುಖವನ್ನು ನೋಡಿ ಬೆಚ್ಚಿಬಿದ್ದೆ.  ಬಳಲಿ ಬೆಂಡಾಗಿದ್ದ ಆತ, ಮಾನಸಿಕವಾಗಿಯೂ ದೈಹಿಕವಾಗಿಯೂ ಛಿದ್ರಗೊಂಡಿದ್ದವನ ಹಾಗೆ  ಕಂಡುಬಂದನು.  ಆತ ನನ್ನತ್ತ ಒಂದು ತಾತ್ಸಾರದ ನೋಟ ಬೀರಿ ಪುನಃ ಆತನ ತಿಂಡಿಯನ್ನು ಚಪ್ಪರಿಸುವುದರಲ್ಲಿ ಮಗ್ನನಾದ.  ನಾನು ಸ್ವಲ್ಪ ಯೋಚಿಸಿ ನಂತರ ಮೆಲ್ಲನೇ ಕೇಳಿದೆ, ' ಯಾರು ನೀನು ? '. ಆತ ತಕ್ಷಣ ಕತ್ತು ತಿರುಗಿಸಿ ತಿರಸ್ಕಾರದಿಂದ ನುಡಿದ, ' ನಿನಗೆ ಕಣ್ಣು ಕಾಣಿಸುವುದಿಲ್ಲವೇ ? ನಾನು ದೇವರು !'. 

ಆತ ಪುನಃ ಆತನ ಲೋಕಕ್ಕೆ ಜಾರಿದ. ನನಗೆ ಆತನ ಪರಿಸ್ಥಿತಿಯ ಅರ್ಥವಾಯಿತು. ಬಹುಷಃ ಈ  ಸಾಂಕ್ರಾಮಿಕದ ಎರಡು ತಿಂಗಳ ಸಾರ್ವಜನಿಕ ನಿರ್ಬಂಧದ ಕಾಲದಲ್ಲಿ ಆತನ ಜೀವ ಜರ್ಝರಿತವಾಗಿರಬೇಕು.  

ನಾನು ಆತನ ಬಳಿಗೆ ಹೋದೆ. ಆತ ಇನ್ನೂ ಮಣ್ಣು ತಿನ್ನುವುದರಲ್ಲಿ ಮಗ್ನನಾಗಿದ್ದ. ನಾನು, ಹೇಳಿದೆ,     '  ಅದನ್ನು ತಿನ್ನಬೇಡ, ನಡೆ ನನ್ನ ಮನೆಗೆ ಹೋಗೋಣ, ಅಲ್ಲಿ ಊಟ ಮಾಡುವಿಯಂತೆ ' ಎಂದು ಹೇಳಿದೆ. ಆತ ಪುನಃ ಕೋಪಗೊಂಡು ನನ್ನತ್ತ ತಿರುಗಿದ, 'ನಾನು ಬಡವರ ದೇವರು, ಅವರು ಈಗ ಏನು ತಿನ್ನುತ್ತಿದ್ದಾರೋ ಅದನ್ನೇ ತಿನ್ನುವೆ, ನೀನು ಜಾಗ ಖಾಲಿ ಮಾಡು ಇಲ್ಲಿಂದ' 

'ನಿನ್ನ ಊರು ಯಾವುದು ಅದಾದರೂ ಹೇಳು'
ಆತ ಪಕಪಕನೆ ನಕ್ಕುಬಿಟ್ಟ. ಗಡ್ಡ ಮೀಸೆಗಳ ಪೊದೆಯ ಕಪ್ಪುಮುಖದಲ್ಲಿ ಮಿಂಚು ಹೊಳೆದಂತೆ ನಗತೊಡಗಿದ. ನಗುವು ಆರ್ಭಟದ ಸದ್ದಾಗಿ ಬದಲಾಯಿತು. ನೆಲಕ್ಕೆ ಬಾಗಿ ತಲೆತಗ್ಗಿಸಿ ನಗುತ್ತಿದ್ದವನು ಕೊನೆಗೆ ತಲೆಯೆತ್ತಿ ಆಕಾಶದತ್ತ ನೋಡಿ ನಗತೊಡಗಿದ. 

'ದೇವರ ಚರಿತ್ರೆ ನಿನಗೆ ತಿಳಿಯಬೇಕೆ? '
ನಾನು 'ಹೌದು' ಎಂದು ತಲೆಯಾಡಿಸಿದೆ. ಆತ 'ಬಾ ಕುಳಿತು ಕೋ' ಎಂದು ತನ್ನ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ. ನಾನು ಮರು ಮಾತನಾಡದೆ ಕುಳಿತುಕೊಂಡೆ. ಆತ ಮಾತನಾಡಲು ಆರಂಭಿಸಿದ. ತಾನು ಎಲ್ಲೋ ದೊಡ್ಡ ದೊಡ್ಡ ದೇಶಗಳಲ್ಲಿ ಪೂಜಿಸಲ್ಪಡುತ್ತಿದ್ದೆನೆಂದೂ ಅಲ್ಲೆಲ್ಲಾ ತನಗೆ ಅಪಾರವಾದ ಭಕ್ತರಿದ್ದರೆಂದೂ ಹೇಳಿದ. 

ಕೊನೆಗೆ ಆ ಜನರೆಲ್ಲರ ಭಕ್ತಿಯು ಬೂಟಾಟಿಕೆಯ ಹಾಗೆ ಕಂಡು ಬಂದು ಅವರೆಲ್ಲರೂ ಮೋಸಗಾರರ ಹಾಗೆ ಕಂಡರೆಂದೂ ಹೇಳಿದ. ದೊಡ್ಡ ಮಂದಿರವೊಂದನ್ನು ಕಟ್ಟುತ್ತಿದ್ದ ಕಾರ್ಮಿಕರನ್ನು ಕೊನೆಗೆ ಸಂಬಳವೇ ಕೊಡದೆ ಓಡಿಸಿದಾಗ ತಾನು ಅವರ ಹಿಂದೆಯೇ ಓಡಿ ಬಂದೆನೆಂದೂ ಹೇಳಿದ. ಅಂದಿನಿಂದ ತಾನು ಅವರ ಜೊತೆಯೇ ಊರೂರು ತಿರುಗುತ್ತಿರುವೆನೆಂದು ವಿವರಿಸಿದ.

ತಾನು ಬಡವರ ಜೊತೆಗೆ ಸ್ಲಮ್ಮುಗಳಲ್ಲಿ ನೆಲೆಗೊಂಡಿದನ್ನೂ ನಿರಂತರವಾಗಿ ಸೊಳ್ಳೆಗಳಿಂದ  ಕಚ್ಚಿಸಿಕೊಂಡು ಮಲೇರಿಯಾ, ಡೆಂಗ್ಯೂ ಮೊದಲಾದ ಕಾಯಿಲೆಗಳಿಗೆ ತುತ್ತಾದುದನ್ನೂ ಹೇಳಿದ.  ನಾನು ಮೌನವಾಗಿ ಆಲಿಸತೊಡಗಿದೆ. 

ನಿರ್ಮಾಣ ಹಂತದ ಕಟ್ಟಡಗಳ ತಗಡು ಶೀಟಿನೊಳಗೆಯೂ, ಮೇಲು ಸೇತುವೆಗಳ ಕೆಳಗಿನ ಬಿಡಾರಗಳಲ್ಲಿಯೂ ವಾಸ ಮಾಡಿದ್ದನ್ನೂ ಒಮ್ಮೆ ಸರಕಾರಿ ಅಧಿಕಾರಿಗಳು ಮತ್ತು ಭೂಗಳ್ಳರು ಶಾಮೀಲಾಗಿ  ರಾತೋರಾತ್ರಿ ತನ್ನ ಜನರ ಗುಡಿಸಲುಗಳಿಗೆ ಬೆಂಕಿಕೊಟ್ಟದ್ದನ್ನೂ ಆಗ ತಾನು ತನ್ನ ಜನರ ಜೊತೆಗೆ ರೈಲು ನಿಲ್ದಾಣದ ಫ್ಲಾಟ್ ಫಾರಮ್ಮುಗಳಲ್ಲಿ ಮಲಗಿದುದನ್ನೂ, ಅಲ್ಲಿಯೂ ರೈಲ್ವೇ ಪೋಲಿಸರು ಲಾಠಿಯಿಂದ ಹೊಡೆದು ಓಡಿಸಿದುದನ್ನು ವಿವರಿಸುವಾಗ ಆತನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. 

ಆತ ಮಾತು ನಿಲ್ಲಿಸಿ ಮಣ್ಣು ತುಂಬಿಸಿ ತಿನ್ನುತ್ತಿದ್ದ  ಪತ್ರಿಕೆಯ ಚೂರನ್ನು ನನಗೆ ನೀಡಿದ. ಅದರಲ್ಲಿ ಹಸಿವು ತಾಳಲಾರದೆ ಕೆಲವು ಮಕ್ಕಳು ಮಣ್ಣು ತಿಂದು ಅಸ್ವಸ್ಥರಾದ ಸುದ್ದಿಯೊಂದು ಪ್ರಕಟವಾಗಿತ್ತು.  ನನಗೆ ಏನೂ ಮಾತನಾಡಲು ತೋಚಲಿಲ್ಲ. ಕೊನೆಗೆ ಆತನೇ ಮಾತನಾಡಿದ, ಈ ಭೂಮಿಯಲ್ಲಿ ಬಡವರಿಗೆ ಮೋಸವಾಗುತ್ತಿದೆ, ಆದರೆ ಅವರೊಳಗೆ ಒಗ್ಗಟ್ಟಿಲ್ಲ ಎಂದ. , ನಾನು ಹೌದೆಂದು ತಲೆಯಲ್ಲಾಡಿಸಿದೆ. ಆತ ಗುಟ್ಟು ಹೇಳುವವನಂತೆ ಧ್ವನಿಯನ್ನು ತಗ್ಗಿಸಿ ನನ್ನ ಕಿವಿಯ ಹತ್ತಿರ ಬಂದು  'ನಿನಗೆ ಗೊತ್ತೇ ? ' ಎಂದ, ನಾನು   ' ಇಲ್ಲ ' ಎಂದು ತಲೆ ಅಲ್ಲಾಡಿಸಿದೆ. ಆತ   
' ಪ್ರಜಾಪ್ರಭುತ್ವವೆಂಬುದೊಂದು ಮೋಸ ' ಎಂದು ಪಿಸುಗುಟ್ಟಿದ.    ಆತನ ಪಾತಾಳಕ್ಕಿಳಿದ ಕಣ್ಣುಗಳ ಕಗ್ಗತ್ತಲ ಗುಹೆಗಳಿಂದ ಹೊರತಂದ ರಹಸ್ಯಗಳನ್ನು ಹೇಳುವಂತೆ ಆತ ನನ್ನ ಮುಖವನ್ನು ನೋಡುತ್ತಿದ್ದ. ನಾನು ಕೂಡಾ ಕೆಳದುಟಿಯನ್ನು ತುಸುಮುಂದೆ ಮಾಡಿ ಜೋಲು ಮೋರೆ ಹಾಕಿ ಆತನ ಮಾತಿಗೆ ಸಮ್ಮತಿಸುವಂತೆ ತಲೆದೂಗಿದೆ.  

 ಇಲ್ಲಿನ ಹೆದ್ದಾರಿಗಳು, ಅದರಲ್ಲಿ ಓಡುವ ಬಸ್ಸುಗಳು, ರೈಲು ಬಂಡಿಗಳು, ಅಣೆಕಟ್ಟುಗಳು, ಕಾರ್ಖಾನೆಗಳು, ವ್ಯಾಪಾರಿ ಮಳಿಗೆಗಳು, ಕಾಲೇಜುಗಳು, ವಸತಿ ಸಮುಚ್ಚಯಗಳು, ಬ್ಯಾಂಕುಗಳು,  ಇವೆಲ್ಲವನ್ನೂ ತನ್ನ ಜನರ ರಕ್ತದಿಂದ ನಿರ್ಮಿಸಲಾಗುತ್ತಿದೆ. ಆದರೆ ನನ್ನ ಜನರಿಗೆ ಇವಾವುಗಳ ಮೇಲೆಯೂ ಹಕ್ಕಿಲ್ಲ, ಈ ಲೋಕವನ್ನು ಕೇವಲ ಸಿರಿವಂತರಿಗಾಗಿಯೇ ಕಟ್ಟಲಾಗುತ್ತಿದೆ ಎಂದ. ತನ್ನ ಜನರ ಜೊತೆ ನೂರಾರು ಮೈಲೆ ಬರಿಗಾಲಿನಲ್ಲಿ ನಡೆದುದರಿಂದಾಗಿ ತನ್ನ ಅಂಗಾಲುಗಳು ಒಡೆದು ಹೋದವು ಎಂದು ರಕ್ತಮಯವಾಗಿದ್ದ ಆತನ ಪಾದಗಳನ್ನು ನನಗೆ ತೋರಿಸಿದ.  ಊರಿಂದ ಊರಿಗೆ ಬಿರುಬಿಸಿಲಿನಲ್ಲಿ ನಡೆದಾಡುವಾಗ ಬಳಲಿ ಬೆಂಡಾಗಿ ದಾರಿ ಮಧ್ಯದಲ್ಲಿಯೇ ಹೆರಿಗೆಬೇನೆಗೊಳಗಾದ ಗರ್ಭಿಣಿಯರು,  ಹಸಿವಿನಿಂದ ಅಸುನೀಗಿದ ಹಸುಳೆಗಳೂ, ಪ್ರತೀ ಜೆಲ್ಲೆಗಳ ಚೆಕ್ ಪೋಸ್ಟ್ ಗಳಲ್ಲಿ ಲಾಠಿ ಬೀಸಿ ಬಾಸುಂಡೆ ಬರುವಂತೆ ಹೊಡೆಯುತ್ತಿದ್ದ ಪೋಲಿಸರು  , ಹೀಗೆ ಎಲ್ಲರೂ ತನ್ನ ಜನರಿಗೆ ಶತ್ರು ಸದೃಶರಾಗಿ ಕಾಡಿದ್ದನ್ನು ಹೇಳಿ ಕಣ್ಣೀರು ತಂದುಕೊಂಡ. 

  ತನ್ನ ಜನರು ನೆಲೆಯಿಲ್ಲದ ಜನರು ಅವರಿಗೆ ಸ್ವಂತ ವಿಳಾಸವೇ ಇಲ್ಲ. ತಾನು ಅವರೊಂದಿಗಿರುವ ಕಾರಣ ತಾನು ಕೂಡಾ ವಿಳಾಸವಿಲ್ಲದಿರುವ ದೇವರು ಎಂದು ಮರುಗಿದ. 

ನನಗೂ ಬೇಸರವಾಯಿತು. ನಾನು ಆತನ ಹೆಗಲಿಗೆ ಮೆಲ್ಲನೆ ಕೈಯ್ಯಿಂದ ತಟ್ಟಿ ನೇವರಿಸಿದೆ. ಆತನ ಕಂಗಳಿಂದ ಕಣ್ಣೀರು ಧಾರಾಕಾರವಾಗಿ ಹರಿದವು. ಆತ ನನ್ನ ಹೆಗಲಿಗೆ ಒರಗಿಕೊಂಡ. ನಾನು ಹೇಳಿದೆ, '  ಸಮಾಧಾನ ತಂದುಕೋ, ಮುಂದೊಂದು ದಿನ ಸಮ ಸಮಾಜ  ಸೃಷ್ಠಿಯಾಗಲಿದೆ ಅಲ್ಲಿ ಬಡವ - ಶ್ರೀಮಂತರೆಂಬ ಭೇದಭಾವವಿಲ್ಲದೆ ಎಲ್ಲರೂ ಒಂದಾಗಿ ಬದುಕಬಹುದು, ನಿನಗೆ ಕಾರ್ಲ್ ಮಾರ್ಕ್ಸ್ ಗೊತ್ತೇ?' ಆತ ನನ್ನ ಮುಖವನ್ನೇ ನೋಡುತ್ತಾ ಹೇಳಿದ, ' ಗೊತ್ತು, ಆತನದೊಂದು ದೊಡ್ಡ ಬ್ರೆಡ್ಡಿನ ಕಂಪೆನಿಯಿತ್ತಲ್ಲವೇ? ಅಲ್ಲಿ ಎಷ್ಟು ಜನರಿಗೆ ಕೆಲಸವಿತ್ತು ' ಆತ ತನ್ನಲ್ಲೇ ಮರುಗಿದ.  ನಾನು 'ಅಲ್ಲ ಅದು ಮಾರ್ಕ್ ಆಂಡ್ ಸ್ಪೆನ್ಸರ್ ಕಂಪೆನಿ, ನಾನು ಹೇಳಿದ್ದು ಕಾರ್ಲ್ ಮಾರ್ಕ್ಸನ ಬಗ್ಗೆ ಕಾರ್ಮಿಕ ಕ್ರಾಂತಿಯ ಕ್ರಾಂತಿಯ ಹರಿಕಾರ...' 

ಆತ  ಸಿಟ್ಟಿಗೆದ್ದ,  'ಕ್ರಾಂತಿ !' ಆತ ಅಬ್ಬರಿಸುತ್ತಾ ಎದ್ದು ನಿಂತ. 

 ' ನಾನು ಮನಸ್ಸು ಮಾಡಿದರೆ ಈ ಕ್ಷಣದಲ್ಲೇ ಜನರನ್ನು ರೊಚ್ಚಿಗೆಬ್ಬಿಸಿ ಕ್ರಾಂತಿ ನಡೆಸಬಲ್ಲೆ, ನನ್ನ ಜನ ಕಟ್ಟಿದ ಆ ನಗರಗಳನ್ನು, ಆ ಕಟ್ಟಡಗಳನ್ನು ಆ ಭವ್ಯ ಬಂಗಲೆಗಳನ್ನು ಕ್ಷಣಾರ್ಧದಲ್ಲಿ ಕೆಡವಿ ಪುಡಿಗುಟ್ಟಬಲ್ಲೆ, ನನ್ನ ಜನಕಟ್ಟಿದ ಅಣೆಕಟ್ಟುಗಳನ್ನು ಒಡೆದು ನಿಮ್ಮ ಊರುಗಳನ್ನು ನೀರಿನಿಂದ ಮುಳುಗಿಸಬಲ್ಲೆ, ಸೇತುವೆಗಳನ್ನು ತುಂಡರಿಸಿ ನಿಮ್ಮನ್ನು ಮೂಲೆಗುಂಪು ಮಾಡಬಲ್ಲೆ, ನನ್ನ ಜನರ ಬೆವರಿನಿಂದ ನಡೆವ ಫ್ಯಾಕ್ಟರಿಗಳನ್ನು ಸುಟ್ಟು ಭಸ್ಮ ಮಾಡಬಲ್ಲೆ, ಅಣುಸ್ಥಾವರಗಳನ್ನು ಕೆಡವಿ ಪ್ರಕೃತಿಯನ್ನೇ ಸುಟ್ಟು ಸಕಲವನ್ನೂ ಸರ್ವನಾಶ ಮಾಡಿಬಿಡಬಲ್ಲೆ... ಆದರೆ ...

 ...ನಾನು ಹಾಗೆ ಮಾಡುವುದಿಲ್ಲ ' ಎಂದು ಹೇಳಿ ಸುಮ್ಮನೇ  ಕೆಳಗೆ ಕುಳಿತುಕೊಂಡ. 

ನಾನು ಮೆಲ್ಲನೆ ಕೇಳಿದೆ,  ' ಯಾಕೆ ಹಾಗೆ ಮಾಡುವುದಿಲ್ಲ ?'

 ಆತ ಕೋಪದಿಂದ ನನ್ನನ್ನು ಕೆಕ್ಕರಿಸಿ ಹಲ್ಲುಕಡಿಯುತ್ತಾ ಹೇಳಿದ,  

    ' ಎಲ್ಲವನ್ನೂ ಪುಡಿ ಮಾಡಿದ ನಂತರ ಅದನ್ನು ಮತ್ತೆ  ಕಟ್ಟುವ ಕೆಲಸ ನನ್ನ ಜನರ ಹೆಗಲಿಗೇ ಬೀಳುವುದಿಲ್ಲವೇ ?  '

 ಆತನ ಕೋಪ ನೋಡಿ ನಾನು ಸುಮ್ಮನೆ ಹೌದೆಂದು ತಲೆಯಾಡಿಸಿ ಸುಮ್ಮನಾದೆ.  

ಆತನ ಮುಖವು ಗಂಟಿಕ್ಕಿಕೊಳ್ಳತೊಡಗಿತ್ತು. ಕಣ್ಣುಗಳು ಕೆಂಡದುಂಡೆಗಳಂತೆ ಗೋಚರಿಸುತ್ತಿದ್ದವು. ಕೆಂಗಣ್ಣುಗಳಲ್ಲಿ  ಹರಿಯುತ್ತಿದ್ದ ರಕ್ತ ಮಿಶ್ರಿತ ಕಣ್ಣೀರನ್ನು  ನೋಡಿ ವಿಷಯಾಂತರ ಮಾಡೋಣವೆಂದು ನಾನು ಕೇಳಿದೆ   
' ದೇವರೇ ನಿನ್ನ ಕಣ್ಣು ಕಿವಿಗಳಲ್ಲಿ ನೆತ್ತರು ತೊಟ್ಟಿಕ್ಕುತ್ತಿದೆ ನೋಡು'. ಅದನ್ನು ಕೇಳಿ ಆತನ ಕೋಪ ಇಮ್ಮಡಿಯಾಯಿತು. ಪಕ್ಕದಲ್ಲಿದ್ದ ಕಲ್ಲನ್ನು ಕೈಗಳಲ್ಲಿ ಎತ್ತಿಕೊಂಡ, ನನಗೆ ಭಯವಾಗತೊಡಗಿತು. ನಾನು ಅಲ್ಲಿಂದ ಎದ್ದು ಸ್ವಲ್ಪ ದೂರ ಓಡಿದೆ.

 ಆತ ಜೋರಾಗಿ ಕೂಗಿದ್ದು ಕೇಳಿಸಿತು, ' ನಿಮ್ಮ ಸಾಹಿತ್ಯ, ಸಿನಿಮಾ,  ಕವಿಗೋಷ್ಠಿಗಳನ್ನು  ನಿಲ್ಲಿಸಿರೋ ಮೂದೇವಿಗಳಾ...'. 

ನನಗೂ ಸಿಟ್ಟುಬಂತು, ನಾನು ಆತನತ್ತ ಜೋರಾಗಿ ಕೂಗಿ ಹೇಳಿದೆ, ' ನಾವೂ ಸಹ ಗಾಂಧೀಜಿಯವರ ಹೆಸರಿನಲ್ಲಿ,  ಒಂದು ದಿನದ ಉಪವಾಸ ಹಿಡಿದಿದ್ದೇವೆ, ನಿನ್ನ ಜನರಿಗೋಸ್ಕರ...' 

ಆತ ಕೈಯ್ಯಲ್ಲಿದ್ದ ಕಲ್ಲನ್ನು ಬೀಸಿ ನನ್ನತ್ತ ಒಗೆದ. ನಾನು ಓಡಿದೆ, ಕಲ್ಲು ಗುರಿತಪ್ಪಿ ಪಕ್ಕದ ಮರಕ್ಕೆ 'ಧಡ್ ! 'ಎಂದು ಬಡಿಯಿತು. 


-- ಪುನೀತ್ ಅಪ್ಪು
15-05-2020

    Puneeth Appu 

Comments